ಪುತ್ತೂರು : ಪುತ್ತೂರಿನ ನಾಟ್ಯರಂಗ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಪ್ರಸ್ತುತಪಡಿಸಿದ ‘ವಾಚಿಕಾಭಿನಯ’ ಪ್ರಸ್ತುತಿಯು ದಿನಾಂಕ 27 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ತಾಳವಾದ್ಯ ನುಡಿಸುವುದರ ಮೂಲಕ ಉದ್ಘಾಟಿಸಿ ವಿವೇಕಾನಂದ ಕನ್ನಡ ಶಾಲೆಯ ಮುಖ್ಯ ಗುರುಗಳಾದ ಹಾಗೂ ನಾಟ್ಯರಂಗದ ಪೋಷಕರಾದ ಆಶಾ ಬೆಳ್ಳಾರೆ “ಮಕ್ಕಳ ಕಲ್ಪನಾ ಶಕ್ತಿ, ಕುತೂಹಲ, ಸೂಕ್ಷ್ಮತೆಯ ಭಾವ ವಿಕಾಸದಲ್ಲಿ ಕಥಾ ವಾಚನದ ಪಾತ್ರ ಬಹಳ ಪ್ರಮುಖವಾಗಿದೆ. ಈ ದಿಶೆಯಿಂದ ರಂಗಭೂಮಿ ಕಾರ್ಯ ನಿರ್ವಹಿಸುತ್ತಿದ್ದು, ಎಳವೆಯಿಂದಲೇ ಈ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸುಕನ್ಯ ಕನಾರಳ್ಳಿ ಕನ್ನಡಕ್ಕೆ ಅನುವಾದಿಸಿದ ಕಮಲಾದಾಸ್ ಅವರ ಮಲಯಾಳ ಕಥೆ ‘ಬೇಸಿಗೆ ರಜಾಕಾಲ’ ಹಾಗೂ ರಘುನಾಥ ಚಹ ಅವರ ‘ಸುಂಯ್ ದುಬಕ್ ಟುಪಕ್’ ಕಥೆಗಳನ್ನು ವಾಚಿಕಾಭಿನಯದಲ್ಲಿ ಪ್ರಸ್ತುತಪಡಿಸಿದವರು ನಾಟ್ಯ ರಂಗ ನಿರ್ದೇಶಕರೂ, ಶಾಸ್ತ್ರೀಯ ಹಾಗೂ ರಂಗಭೂಮಿ ಕಲಾವಿದರಾದ ವಿದುಷಿ ಮಂಜುಳ ಸುಬ್ರಹ್ಮಣ್ಯ ಮತ್ತು ವಿನಿತಾ ಶೆಟ್ಟಿ ಇವರು. ಪ್ರಸ್ತುತಿಯ ಅನಂತರ ನಡೆದ ಸಂವಾದದಲ್ಲಿ ನಾಟ್ಯರಂಗದ ಪೋಷಕರು ಮತ್ತು ಮಕ್ಕಳು ಪ್ರಸ್ತುತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂವಾದದಲ್ಲಿ ವಾಚಿಕಾಭಿನಯ ಪ್ರಸ್ತುತಪಡಿಸಿದ ವಿದುಷಿ ಮಂಜುಳಾ ಸುಬ್ರಮಣ್ಯ ಹಾಗೂ ವಿನಿತಾ ಶೆಟ್ಟಿ ಇವರು ನಾಟಕ ವೀಕ್ಷಣೆ ಮತ್ತು ವಿಭಿನ್ನ ಸಾಧ್ಯತೆಗಳ ಆಲೋಚನೆಗಳಲ್ಲಿ ರಂಗಭೂಮಿಯ ಪಾತ್ರ ಪ್ರಮುಖತೆಯ ಬಗ್ಗೆ ತಿಳಿಸಿದರು.