ಧಾರವಾಡ : ಅಭಿನಯ ಭಾರತಿ (ರಿ.) ಧಾರವಾಡ ಹಾಗೂ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ, ಅಭಿನಯ ಭಾರತಿ ರಂಗಪ್ರಶಸ್ತಿ ಪ್ರದಾನ ಹಾಗೂ ದಿ. ಪಿ.ಆರ್. ಮಳಗಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 27 ಮಾರ್ಚ್ 2025ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬೆಳಿಗ್ಗೆ 10-30 ಗಂಟೆಗೆ ಆಯೋಜಿಸಲಾಗಿದೆ.
ಹಿರಿಯ ರಂಗ ಸಂಸ್ಥೆ ಅಭಿನಯ ಭಾರತಿಯು ಕಳೆದ ನಾಲ್ಕು ದಶಕಗಳಿಂದ ತನ್ನ ವಿವಿಧ ರಂಗ ಚಟುವಟಿಕೆಗಳ ಮೂಲಕ ಸಂಸ್ಕೃತಿ ಪ್ರಿಯರ ಮನಸ್ಸನ್ನು ಉಲ್ಲಸಿತಗೊಳಿಸಿದೆ. 1996ರಿಂದ ಈ ಮೂರು ದಶಕಗಳುದ್ದಕ್ಕೂ ಪ್ರತಿ ವರ್ಷ ಮಾರ್ಚ್ 27ರಂದು ‘ವಿಶ್ವ ರಂಗಭೂಮಿ’ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಪ್ರತಿ ವರ್ಷವೂ ರಂಗ ಪ್ರಪಂಚದ ವಿಶಿಷ್ಟ ಸಾಧಕರಿಗೆ ‘ಅಭಿನಯ ಭಾರತಿ ರಂಗ ಪ್ರಶಸ್ತಿ’ಯನ್ನು ನಗದು ಪುರಸ್ಕಾರ ಹಾಗೂ ನಟರಾಜ ವಿಗ್ರಹ ನೀಡಿ ಫಲಪುಷ್ಪದೊಂದಿಗೆ ಗೌರವಿಸುವ ಮೂಲಕ ಜನ ಮೆಚ್ಚುಗೆ ಪಡೆದಿದೆ. ಈ ಸಲ ಅಭಿನಯ ಭಾರತಿ ತನ್ನ 30ನೇ ಪ್ರಶಸ್ತಿಯನ್ನು ನೀಡಲಿದೆ. ಈ ಸ್ಮರಣೀಯ ಸಂದರ್ಭದಲ್ಲಿ ಈ ಗೌರವ ಪ್ರಶಸ್ತಿಗೆ ಭಾಜನರಾದವರು ಸವದತ್ತಿಯ ಕ್ರಿಯಾಶೀಲ ನಟ, ನಿರ್ದೇಶಕ, ಸಂಘಟಕ ಹಾಗೂ ‘ರಂಗ ಆರಾಧನಾ’ ತಂಡದ ಸಂಸ್ಥಾಪಕ ಶ್ರೀ ಝಾಕಿರ್ ನದಾಫ್ ಅವರು.
ಶ್ರೀ ಝಾಕೀರ್ ನದಾಫ್ ಇವರು ವೃತ್ತಿ ಜೀವನಕ್ಕಾಗಿ ಇಂಜಿನಿಯರಿಂಗ್ ಡಿಪ್ಲೋಮಾ ಹಾಗೂ ಎನ್.ಟಿ.ಟಿ. ಎಫ್ ತರಬೇತಿ ಪಡೆದಿದ್ದರೂ, ರಂಗಭೂಮಿ ಇವರ ಜೀವನದ ಉಸಿರಾಗಿದೆ. 1987ರಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜಯತೀರ್ಥ ಜೋಶಿ, ಶ್ರೀಪತಿ ಮಂಜನ್ ಬೈಲ್ ಹಾಗೂ ವಿನೋದ್ ಅಂಬೇಕರ ಅವರಂತಹ ರಂಗದಿಗ್ಗಜರಿಂದ ರಂಗ ದೀಕ್ಷೆ ಪಡೆದು ಹವ್ಯಾಸಿ ರಂಗಭೂಮಿಯ ಸವ್ಯಸಾಚಿ ಎನಿಸಿದ್ದಾರೆ. ‘ಕದಡಿದ ನೀರು’, ‘ದಾರಿ ಯಾವುದಯ್ಯ ವೈಕುಂಠಕೆ’, ‘ವಾಸಾಂಶಿ ಜೀರ್ಣಾನಿ’, ‘ಗುಲಾಮನ ಸ್ವತಂತ್ರ ಯಾತ್ರೆ’, ‘ಉದ್ಭವ’, ‘ಮೃಚ್ಛಕಟಿಕ’ ಹಾಗೂ ‘ಹುಚ್ಚರ ಕನಸು’ ಮುಂತಾದ ಹವ್ಯಾಸಿ ನಾಟಕಗಳಲ್ಲಿ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಇವರು ಸಂಗೀತದಲ್ಲೂ ಪರಿಣಿತಿ ಪಡೆದು ಕೆಲವು ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಅನೇಕ ವೃತ್ತಿ ರಂಗಭೂಮಿ ಶೈಲಿಯ ನಾಟಕಗಳಲ್ಲಿ ಭಾಗವಹಿಸಿ ಬರೆದು, ನಿರ್ದೇಶಿಸಿ, ಸೈ ಎನಿಸಿಕೊಂಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ‘ಬೆಳವಡಿ ಮಲ್ಲಮ್ಮ’, ‘ಕಿತ್ತೂರು ಚೆನ್ನಮ್ಮ’, ‘ಬಾಸಿಂಗ ಬಲ’, ‘ದೇಸಗತಿ’, ‘ಕರುನಾಡ ಸಿಡಿಲು’, ‘ಶಿರಸಂಗಿ ಲಿಂಗರಾಜರು’ ಹಾಗೂ ‘ತೇರು’ ಮುಂತಾದವುಗಳು. ಹೀಗೆ ಮೂರು ದಶಕಗಳಿಂದ ನೂರಾರು ಪ್ರಯೋಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇತ್ತೀಚಿಗೆ ಕೆಲವು ವರ್ಷಗಳಿಂದ ಸವದತ್ತಿಯ ‘ರಂಗ ಆರಾಧನಾ’ ತಂಡದ ಮೂಲಕ ರಂಗೋತ್ಸವಗಳನ್ನು ಏರ್ಪಡಿಸಿ, ಜನಮಾನಸದಲ್ಲಿ ಹೆಗ್ಗುರುತು ಮೂಡಿಸಿದ್ದಾರೆ.
ಇವರ ಪ್ರತಿಭೆಯನ್ನು ಗುರುತಿಸಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಬೆಳಗಾವಿಯ ರಂಗಸಂಪದ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಬೀದಿ ನಾಟಕ ಅಕಾಡೆಮಿಗಳಿಂದ ಸಿ.ಜಿ.ಕೆ. ಪ್ರಶಸ್ತಿ, ಇವರ ಮುಡಿಗೇರಿವೆ. ಈಗ ಅಭಿನಯ ಭಾರತಿಯು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಕಲಾವಿದ, ಗ್ರಾಮೀಣ ರಂಗ ಪ್ರತಿಭೆ, ಸವದತ್ತಿಯ ರಂಗ ಸಂಘಟಕ ಶ್ರೀ ಝಾಕಿರ್ ನದಾಫ್ ಇವರಿಗೆ ಈ ವರ್ಷದ ‘ಅಭಿನಯ ಭಾರತಿ ರಂಗ ಪ್ರಶಸ್ತಿ’ ನೀಡಲು ಹೆಮ್ಮೆ ಪಡುತ್ತದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 27 ಮಾರ್ಚ್ 2025ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ನಡೆಯಲಿದೆ. ಈ ಸಮಾರಂಭದ ಗೌರವಾಧ್ಯಕ್ಷತೆಯನ್ನು ಹುಬ್ಬಳ್ಳಿಯ ಉದ್ಯಮಿ ಶ್ರೀ ಚಿ.ವಿ.ಎಸ್.ವಿ. ಪ್ರಸಾದ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಧಾರವಾಡದ ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಇವರು ಭಾಗವಹಿಸಿ ‘ಸಂಸ್ಕೃತ ನಾಟಕಗಳಲ್ಲಿ ರಾಜಕೀಯ ಪ್ರಜ್ಞೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ್ ಅಂಗಡಿ ಅವರು ಹಾಗೂ ಶ್ರೀ ಅರವಿಂದ ಕುಲಕರ್ಣಿ ಭಾಗವಹಿಸಲಿದ್ದಾರೆ. ಡಾ. ವಿನಾಯಕ ನಾಯಕ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ವಿಶ್ವ ರಂಗಭೂಮಿ ಸಂದೇಶದ ಕನ್ನಡ ಅವತರಣಿಕೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ಶ್ರೀಮತಿ ಜ್ಯೋತಿ ಪುರಾಣಿಕ ದೀಕ್ಷಿತ್ ಅವರು ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಅಪರೂಪದ ಕಾರ್ಯಕ್ರಮದಲ್ಲಿ ಧಾರವಾಡದ ಸಂಸ್ಕೃತಿ ಪ್ರಿಯ ರಂಗಾಸಕ್ತರು ಪಾಲ್ಗೊಂಡು ವಿಶ್ವರಂಗಭೂಮಿ ದಿನವನ್ನು ಸಾರ್ಥಕಗೊಳಿಸಬೇಕಾಗಿ ಸಂಚಾಲಕ ಶ್ರೀ ಸಮೀರ್ ಜೋಶಿ ಅವರು ವಿನಂತಿಸುತ್ತಾರೆ.