ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ, ನಾಟಕ ಬೆಂಗಳೂರು ಹಾಗೂ ರಂಗ ಸೌರಭ ಜಂಟಿಯಾಗಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವು ದಿನಾಂಕ 27 ಮಾರ್ಚ್ 2025ರ ಗುರುವಾರದಂದು ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಹಂ. ಪ. ನಾಗರಾಜಯ್ಯ ಮಾತನಾಡಿ “ರಂಗಭೂಮಿಯು ಮನೋರಂಜನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮಾಧ್ಯಮವಾಗಿದೆ. ಸಮಾಜವನ್ನು ಕಟ್ಟುವ ಕ್ರಿಯೆಯಲ್ಲಿ ರಂಗಭೂಮಿ ತೊಡಗಿದ್ದು, ಪರಸ್ಪರ ಪ್ರೀತಿಯಿಂದ ಬದುಕುವ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಮನೋರಂಜನೆ ಜತೆಗೆ ವೈವಿಧ್ಯಮಯ ಪ್ರಯೋಗಗಳು ಈ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿದೆ” ಎಂದರು.
ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ “ರಂಗಭೂಮಿ ಮೂಲಕ ಜನರು ಶಾಂತಿ, ಸಹಬಾಳ್ವೆ, ಸೌಹಾರ್ದವನ್ನು ಕಂಡುಕೊಳ್ಳಬಹುದಾಗಿದೆ. ಎಲ್ಲರನ್ನೂ ಒಂದುಗೂಡಿಸುವ ವಿಶೇಷವಾದ ಗುಣವನ್ನು ರಂಗಭೂಮಿ ಹೊಂದಿದೆ. ಇತ್ತೀಚೆಗೆ ಕಲಾಗ್ರಾಮದಲ್ಲಿ ನಡೆದ ರಂಗ ಪರಿಷೆಗೆ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಇದರಿಂದಾಗಿ ರಂಗಭೂಮಿಗೆ ಭವಿಷ್ಯವಿದೆ ಎನ್ನುವುದು ಸ್ಪಷ್ಟ.” ಎಂದರು.
ಲೇಖಕಿ ವಿಜಯಾ ಮಾತನಾಡಿ “ನಾಟಕಗಳು ಸಾಮಾಜಿಕ ಸೌಹಾರ್ದತೆ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಪರಸ್ಪರ ದ್ವೇಷವಿಲ್ಲದ ರಂಗಭೂಮಿಯನ್ನು ಕಟ್ಟಬೇಕು.” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಹುರೂಪಿ ಪ್ರಕಟಿಸಿದ ಬಿ. ಸುರೇಶ್ ಇವರ ‘ಅಡುಗೆಮನೆಯಲ್ಲೊಂದು ಹುಲಿ’, ಕಿರಣ್ ಭಟ್ ಇವರ ‘ಹೌಸ್‌ಫುಲ್’, ನಾ. ದಾಮೋದರ ಶೆಟ್ಟಿ ಇವರ ‘ಚಾರುವಸಂತ’, ಮಹಿಪಾಲರೆಡ್ಡಿ ಮುನ್ನೂರ್ ಇವರ ‘ರಂಗ ಸುನೇರಿ’ ಪುಸ್ತಕಗಳು ಲೋಕಾರ್ಪಣೆಗೊಂಡವು . ಕೃತಿಗಳ ಬಗ್ಗೆ ಬಹುರೂಪಿ ಸಂಸ್ಥಾಪಕ ಜಿ.ಎನ್. ಮೋಹನ್ ಮಾತನಾಡಿದರು. ಅಕಾಡೆಮಿಯ ತ್ರೈಮಾಸಿಕ ಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಎಂ. ಗಾಯತ್ರಿ ಜಿ. ಬಿಡುಗಡೆ ಮಾಡಿದರು.