ಕಾಸರಗೋಡು : ತುಳು ಲಿಪಿ ಬ್ರಹ್ಮನೆಂದೇ ಖ್ಯಾತರಾದ, ತಾಡೆಯೋಲೆ, ಶಿಲಾಶಾಸನದಲ್ಲಿ ಮಾತ್ರ ಕಾಣುತಿದ್ದ ತುಳು ಲಿಪಿಯನ್ನು ಸಂಶೋಧನೆ ಮಾಡಿ ಜನ ಸಾಮಾನ್ಯರೂ ಸುಲಭವಾಗಿ ಕಲಿಯಬಹುದೆಂದು ಲೋಕಕ್ಕೆ ತೋರಿಸಿಕೊಟ್ಟ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನ ದಿನಾಂಕ 10-10-2023ರಂದು ‘ವಿಶ್ವ ತುಳು ಲಿಪಿ ದಿನ’ವನ್ನು ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ವತಿಯಿಂದ ಪುಣಿಂಚತ್ತಾಯರು ಕಲಿತ ಶಾಲೆ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ಪೆರಡಾಲ ಇದರ ಸಹಯೋಗದೊಂದಿಗೆ ನಡೆಸಲಾಯಿತು.
ಶಾಲೆಯ ವ್ಯವಸ್ಥಾಪಕರಾದ ಜಯದೇವ ಖಂಡಿಗೆರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ “ಪುಣಿಂಚಿತ್ತಾಯರು ಇಲ್ಲಿ ವಿದ್ಯಾಭ್ಯಾಸ ಮಾಡಿದವರೆಂಬುವುದೇ ನಮಗೆ ಹೆಮ್ಮೆ ಎನಿಸುತ್ತದೆ. ಅವರ ಜನ್ಮದಿನವನ್ನು ಇವತ್ತು ನಮ್ಮ ಶಾಲೆಯಲ್ಲಿ ಜೈ ತುಲುನಾಡ್ (ರಿ.) ಸಂಘಟನೆಯವರು ಆಚರಿಸುತ್ತಿರುವುದು ಸಂತೋಷ ತಂದಿದೆ” ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈಯ್ಯಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ್ ಎಂ.ಕೆ. ಇವರು ಮುಖ್ಯ ಅತಿಥಿಯಾಗಿ “ಪುವೆಂಪು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎಂಬುದೇ ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಶಾಲೆಯಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಪುವೆಂಪುರವರ ಬಗ್ಗೆ ಬಹಳಷ್ಟು ತಿಳಿಯುವಂತೆ ಮಾಡಿರುವ ಜೈ ತುಲುನಾಡ್ ಸಂಘಟನೆಗೆ ಶುಭವಾಗಲಿ ನಮ್ಮ ಶಾಲೆಯಲ್ಲಿಯೂ ತುಳು ಭಾಷೆ ತುಳು ಲಿಪಿ ಕಲಿಸುವಂತಾಗಲಿ ಎಂದು ಶುಭಹಾರೈಸಿದರು. ಅತಿಥಿಗಳಾದ ಜೈ ತುಳುನಾಡ್ ಇದರ ಕಾರ್ಯದರ್ಶಿ ಕಿರಣ್ ತುಲುವೆ ಸಂಘಟನೆಯ ಧ್ಯೇಯೋದ್ದೇಶದ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ಪುವೆಂಪುರವರ ಪುತ್ರ ವಿಜಯರಾಜ ಪುಣಿಂಚತ್ತಾಯರು ತಂದೆಯವರ ಸಾಧನೆಗೆ ದಾರಿ ದೀಪವಾದ ಅವರ ಗುರುಗಳಾದ ಖಂಡಿಗೆ ಶ್ಯಾಮ ಭಟ್ರನ್ನು ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೂ ಪುವೆಂಪುರವರ ಸಾಹಿತ್ಯ, ಬರಹಗಳ ಬಗ್ಗೆ ತಿಳಿಸಿದರು. ಜೈ ತುಲುನಾಡ್ ಸಂಘಟನೆ ಉಪಾಧ್ಯಕ್ಷರುಗಳಾದ ಉಮೇಶ್ ಸಾಲಿಯಾನ್ ಸಿರಿಯಾ, ಉದಯ್ ಪೂಂಜಾ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಎ. ಶ್ರೀನಾಥ್ ಇವರುಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಪುವೆಂಪು ನಡೆದು ಬಂದ ದಾರಿ ಮತ್ತು ಸಾಧನೆ ಬಗ್ಗೆ ಶಾಲೆಯ ಅಧ್ಯಾಪಿಕೆ ಡಾ. ವಿದ್ಯಾಲಕ್ಷ್ಮಿಯವರು ತಿಳಿಸಿದರು. ಕುಮಾರಿ ಅನ್ವಿತ ಮತ್ತು ಶೈಲಜಾ ಟೀಚರ್ ಪುವೆಂಪು ರಚಿಸಿದ ಗೀತೆಯನ್ನು ಹಾಡಿದರು. ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ಅಧ್ಯಕ್ಷರಾದ ಕುಶಲಾಕ್ಷಿ ವಿ. ಕುಲಾಲ್ ಕಣ್ವತೀರ್ಥರವರು ಅಧ್ಯಕ್ಷತೆಯನ್ನು ವಹಿಸಿ ಪುವೆಂಪುರವರ ಇನ್ನೂ ಮುದ್ರಿಣಗೊಳ್ಳದೆ ಉಳಿದಿರುವ ಲೇಖನಗಳನ್ನು ಸರಕಾರವು ಸಾಹಿತ್ಯ ಅಕಾಡೆಮಿಗಳ ಮುಖಾಂತರ ಮುದ್ರಿಸಿ ಅವರ ಅಮೂಲ್ಯ ಜ್ಞಾನ ಸಂಪತ್ತನ್ನು ಎಲ್ಲರೂ ತಿಳಿಯುವಂತೆ ಆಗಬೇಕು. ಅವರ ಮುದ್ರಿತ ಕೃತಿಗಳು ಮರು ಮುದ್ರಣ ಆಗಬೇಕಿದೆ ಎಂದರು.
ಕಾರ್ಯಕ್ರಮವನ್ನು ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಿಸಿ, ಜೈ ತುಲುನಾಡ್ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ಆಳ್ವ ಇವರು ಸ್ವಾಗತಿಸಿ, ಕೋಶಾಧಿಕಾರಿಗಳಾದ ಉತ್ತಮ್ ಯು. ವಂದನಾರ್ಪಣೆ ಗೈದರು. ಈ ಸಂದರ್ಭದಲ್ಲಿ ಮಹಾಜನ ಕಾಲೇಜಿನ ವ್ಯವಸ್ಥಾಪಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ತುಳು ಲಿಪಿ ಕಲಿಕಾ ಕಾರ್ಯಾಗಾರವನ್ನು ನಡೆಸಲು ಅನುಮತಿಯನ್ನು ಕೋರಿ ಮನವಿ ಸಲ್ಲಿಸಲಾಯಿತು. ಶಾಲಾ ಅಧ್ಯಾಪಕಿ ಶೈಲಜಾ ಇವರು ಕಾರ್ಯಕ್ರಮ ನಿರೂಪಿಸಿದರು. ಜೈ ತುಲುನಾಡ್ (ರಿ.) ಕಾಸರಗೋಡು ವಲಯದ ಕಾರ್ಯದರ್ಶಿ ಜಗನ್ನಾಥ ಬದಿಯಡ್ಕ, ಪದಾಧಿಕಾರಿಗಳಾದ ಹರಿಕಾಂತ ಸಾಲಿಯಾನ್ ಕಾಸರಗೋಡು, ವಿನೋದ ಪ್ರಸಾದ್ ರೈ, ಪವಿತ್ರ ಮಾಡ, ನಿರ್ಮಲ ಖಂಡಿಗೆ ಸಹಕರಿಸಿದರು.