27 ಮಾರ್ಚ್ 2023, ಮಂಗಳೂರು: ಕದಂಡಲೆ ನಾರಾಯಣರವರು 1955ರಲ್ಲಿ ಮಂಗಳೂರಿನ ರಥಬೀದಿಯಲ್ಲಿ “ಕೆ.ಎನ್.ಟೈಲರ್” ಹೆಸರಿನ ಟೈಲರಿಂಗ್ ಅಂಗಡಿ ತೆರೆದು ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಇದು ಮಂಗಳೂರಿನ ನಾಟಕಾಸಕ್ತರಿಗೆ ಸೇರುವ ತಾಣವಾಯಿತು. ಕೆಮ್ತೂರು ದೊಡ್ಡಣ್ಣ ಶೆಟ್ಟಿ, ರಮಾನಂದ ಚೂರ್ಯ ಮುಂತಾದವರ ನಾಟಕಗಳಿಂದ ಪ್ರಭಾವಿತರಾಗಿ ನಾಟಕಾಸಕ್ತಿ ಬೆಳೆಸಿ ಮುಂದೆ 14-04-1958ರಲ್ಲಿ ಯುಗಾದಿ ಸಂದರ್ಭದಲ್ಲಿ “ಶ್ರೀ ಗಣೇಶ್ ನಾಟಕ ಸಭಾ” ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ತುಳು ನಾಟಕ ರಂಗದ ಇತಿಹಾಸವನ್ನೇ ಬದಲಿಸಿದರು. ತನ್ನ ವಿಭಿನ್ನ ನಾಟಕಗಳಿಂದ “ಕೆ.ಎನ್.ಟೈಲರ್” ಎಂಬ ನಾಟಕಗಾರ, ನಿರ್ದೇಶಕ, ನಟ, ಸಂಘಟಕರಾಗಿ ಪ್ರಸಿದ್ಧಿ ಪಡೆದರು. ಕರಾವಳಿ ಭಾಗದಲ್ಲಿ ಕಾಸರಗೋಡಿನಿಂದ ಕುಂದಾಪುರದವರೆಗೆ ತನ್ನ ತುಳು ನಾಟಕಗಳ ಪ್ರದರ್ಶನವಿತ್ತು ಜನ ಮೆಚ್ಚುಗೆ ಗಳಿಸಿದರು. ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ, ದೂರದ ಮುಂಬೈ, ಡೆಲ್ಲಿ, ಚೆನ್ನೈ, ಪುಣೆ, ಬೆಂಗಳೂರು, ಧಾರವಾಡ, ಮೈಸೂರು ಮುಂತಾದ ಪಟ್ಟಣಗಳಲ್ಲಿ ತುಳು ನಾಟಕಗಳ ಕಂಪನ್ನು ಪಸರಿಸಿ ಜನ ಮನ್ನಣೆ ಗಳಿಸಿದವರು ಕೆ.ಎನ್.ಟೈಲರ್ ಇವರು ಹಲವಾರು ನಾಟಕಗಳನ್ನು ರಚಿಸಿ, ನಾಟಕದ ಹೆಸರಲ್ಲೇ ಆಕರ್ಷಣೆ ತಂದಿತ್ತವರು.
“ತಮ್ಮಲೆ ಆರ್ವತ್ತನ ಕೋಲ”, ಏರ್ ಮಲ್ತಿನ ತಪ್ಪು”, ಯನ್ ಸನ್ಯಾಸಿ ಆಪೆ”, “ಕಲ್ಜಿಗದ ವಿಶ್ವಾಮಿತ್ರ ಮೇನಕೆ”, “ಕಾಸ್ದಾಯೆ ಕಂಡನಿ”, “ಇಂದ್ರನ ಆಸ್ತಿ”, ಸೈನಗಾಂಡಲಾ ಸತ್ಯ ಪನ್ಲೆ”, ದೇವರ್ ಕೊರ್ಪರ್”, “ಕಂಡೆನಿ ಬೊಡೆದಿ”, “ಎರೆನ್ಲಾ ನಂಬೊಡ್ಚಿ”, “ಡೈರೆಕ್ಟರ್ ದಾಸು” ಮುಂತಾದ ನಾಟಕಗಳ ಮೂಲಕ ಕೆ.ಎನ್.ಟೈಲರ್ ರವರ ನಾಟಕಗಳು ಮನೆ ಮಾತಾಗಿದ್ದವು. ತುಳು ನಾಟಕ ರಂಗದ ಇತ್ತೀಚೆಗಿನ ಹೆಸರಾಂತ ನಾಟಕ ತಂಡಗಳ ಉದಯವಾಗುವ ಪೂರ್ವದಲ್ಲಿ ಕೆ.ಎನ್.ಟೈಲರ್ ರವರ “ಶ್ರೀ ಗಣೇಶ ನಾಟಕ ಸಭಾ”ದ ನಾಟಕಗಳು ನಾಟಕ ರಂಗದಲ್ಲಿ ಸಂಚಲನವನ್ನು ಮೂಡಿಸಿದ್ದವು. ನಾಟಕ ತರಬೇತಿಯಲ್ಲಿ ಶಿಸ್ತು ಮತ್ತು ಬದ್ಧತೆಯ ಮೂಲಕ ಹೊಸ ಕಲಾವಿದರನ್ನು ಸೃಷ್ಟಿಸಿದ ಕೀರ್ತಿ ಅವರದು. ಕೆ.ಎನ್.ಟೈಲರ್ ಗರಡಿಯಲ್ಲಿ ಪಳಗಿದ ನಟರೆಂದರೆ ಅವರಿಗೆ ನಾಟಕ ರಂಗದಲ್ಲಿ ವಿಶೇಷ ಸ್ಥಾನಮಾನ. ತುಳು ನಾಟಕ ರಂಗದಲ್ಲಿ ಬದಲಾವಣೆಯ ಮೂಲ ಕೆ.ಎನ್.ಟೈಲರ್ ರವರು.
1970ರಲ್ಲಿ ತುಳು ಚಲನ ಚಿತ್ರರಂಗದ ಉಗಮಕ್ಕೆ ಕಾರಣರಾದವರು. ಮೊದಲ ತುಳು ಸಿನೆಮಾಕ್ಕೆ 1970ರಲ್ಲಿ ಮುಹೂರ್ತ ನಡೆಸಿದರು. “ದಾರೆದ ಬೊಡೆದಿ” ಎಂಬ ಇವರ ತುಳು ಚಿತ್ರ, ತುಳು ಚಿತ್ರರಂಗದ ಎರಡನೇ ಚಲನ ಚಿತ್ರವಾಗಿ 1971ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಂಡಿತು. ಆ ಬಳಿಕ ಅವರ ನಟನೆಯ ಹಾಗೂ ನಿರ್ದೇಶನದ 9 ಚಲನಚಿತ್ರಗಳು ಬಿಡುಗಡೆಗೊಂಡವು. “ಕೆ.ಎನ್.ಟೈಲರ್” ಎಂಬ ಹೆಸರು ನಾಟಕ ರಂಗ ಹಾಗೂ ಚಲನ ಚಿತ್ರರಂಗದಲ್ಲಿ ಚಿರಸ್ಥಾಯಿಯಾಯಿತು. 2008ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದ “ಶ್ರೀ ಗಣೇಶ ನಾಟಕ ಸಭಾ”ದ ಸಂಸ್ಥಾಪಕ ಕೆ.ಎನ್.ಟೈಲರ್ ರವರು 01-09-1939ರಲ್ಲಿ ಶ್ರೀಮತಿ ಮುತ್ತು ಮತ್ತು ಶ್ರೀ ಚಂದ್ರು ಇವರ 4ನೇ ಮಗನಾಗಿ ಜನಿಸಿದ್ದು, ದಿನಾಂಕ 18-03-2015ರಂದು ನಮ್ಮನ್ನಗಲಿದ್ದಾರೆ.
ಕೆ.ಎನ್.ಟೈಲರ್ ರವರು ರಚನೆಯ ತುಳು ನಾಟಕಗಳು: “ಬೊಂಬಾಯಿ ಕಂಡನೆ”, “ಪುದರ್ ಕೇನಡೆ”, “ಎನನ್ ಬದ್ಕರೆ ಬುಡ್ಲೆ”, “ಬಾಡಾಯಿದ ಬಂಗಾರ್”, “ಡಾಕ್ಟರ್ ಶಂಕರ್”, “ಕಲ್ಲ್ ದ ದೇವರ್”, “ಮಂಗೆ ಮಲ್ಪೊಡ್ಚಿ”.
ಅಭಿನಯಿಸಿದ ಕನ್ನಡ ನಾಟಕಗಳು: “ಛತ್ರಪತಿ ಶಿವಾಜಿ”, “ಅಣ್ಣ–ತಮ್ಮ”, “ಕಲಿಯುಗದ ಕುರುಕ್ಷೇತ್ರ”, “ರಾಣಾ ಪ್ರಥ್ವಿರಾಜ”, “ಧೂಮಕೇತು”, “ಮುದುಕನ ಮದುವೆ”, “ವರ ಯಾರು ?”, “ತ್ಯಾಗಮೂರ್ತಿ”, “ಸಂಸಾರದಲ್ಲಿ ಸರಿಗಮ”, “ಅಕ್ಕ-ತಂಗಿ”, “ಲಕ್ಷಾದೀಶ್ವರ”, “ರೊಟ್ಟಿಋಣ”
ಪ್ರಶಸ್ತಿಗಳು :
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 1989
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1998
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1998
ಸಂದೇಶ ಪ್ರತಿಷ್ಠಾನ ಪ್ರಶಸ್ತಿ 2000
ಚಲನಚಿತ್ರ ರಂಗದ ಪ್ರಶಸ್ತಿಗಳು :
ಬಿಸತ್ತಿ ಬಾಬು ಚಲನ ಚಿತ್ರಕ್ಕೆ ರಾಜ್ಯ ಸರಕಾರದ ತೃತೀಯ ಪ್ರಶಸ್ತಿ 1972-73
ಭಾಗ್ಯವಂತೆದಿ ಚಲನ ಚಿತ್ರಕ್ಕೆ ರಾಜ್ಯ ಸರಕಾರದ ವಿಶೇಷ ಪ್ರಶಸ್ತಿ 1981-82
ಉತ್ತಮ ಚಿತ್ರಕಥೆ, ಸಂಭಾಷಣೆ ಪ್ರಶಸ್ತಿ (ನವ ಭಾರತ – ತುಳು ಕೂಟದಿಂದ) 1973
ಉತ್ತಮ ನಟ ಪ್ರಶಸ್ತಿ “ಯಾನ್ ಸನ್ಯಾಸಿ ಆಪೆ” 1974
- ಲಕ್ಷ್ಮಣ ಕುಮಾರ್ ಮಲ್ಲೂರು