ಕಾರ್ಕಳ : ಕಾರ್ಕಳ ತಾಲೂಕಿನ ಅಜೆಕಾರು ಗ್ರಾಮದ ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ಹೃದಯಾಘಾತದಿಂದ ದಿನಾಂಕ 31-10-2023ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಶೇಖರ್ ಅಜೆಕಾರ್ ಇವರಿಗೆ ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಇವರು ಪತ್ನಿ, ಓರ್ವ ಮಗ, ಓರ್ವ ಮಗಳನ್ನು ಅಗಲಿದ್ದಾರೆ.
ಅಜೆಕಾರಿನಂತಹ ಸಣ್ಣ ಗ್ರಾಮದಲ್ಲಿ ಜನಿಸಿ ಮುಂಬಯಿಯಂತಹ ಬೃಹತ್ ನಗರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾವನ್ನು ಪೂರೈಸಿ ‘ಹರಿಕೃಷ್ಣ ಪುನರೂರು-ಕನ್ನಡದ ಕೆಲಸಗಳು ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಮುಗಿಸಿ, ಅಲ್ಲಿಯೇ ಪತ್ರಕರ್ತರಾಗಿ ಕಾರ‍್ಯಾರಂಭಿಸಿ, ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿದ್ದರು.
ಇವರ ಆಸಕ್ತಿಯ ಕ್ಷೇತ್ರಗಳು ಹಲವು. ವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕನ್ನಡದ ಹಲವು ಪತ್ರಿಕೆಗಳ ಹಲವು ಮಜಲುಗಳಲ್ಲಿ ದುಡಿದು ಸೈಯೆನಿಸಿಕೊಂಡಿದ್ದಾರೆ. ಹವ್ಯಾಸಿ ಛಾಯಾಚಿತ್ರಕಾರರಾದ ಅವರ ಹಲವು ಉತ್ತಮ ಚಿತ್ರಗಳು ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿವೆ. ಮತ್ತು ಸರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಂಡಿವೆ. ಕಂಪ್ಯೂಟರೀಕೃತ ಛಾಯಾಚಿತ್ರ ಪ್ರದರ್ಶನವೆಂಬ ವಿಶಿಷ್ಟ ಪ್ರಯೋಗವನ್ನು ಅವರು ಮಾಡಿದ್ದಾರೆ. ಕನ್ನಡದ ಪ್ರಸಿದ್ಧ ಕವಿಗಳ ಗೀತೆಗಳಿಗೆ ಯಕ್ಷಗಾನ ಸಂಗೀತವನ್ನು ಅಳವಡಿಸಿ, ಪ್ರದರ್ಶಿಸಿ ಮೆಚ್ಚುಗೆಗಳಿಸಿದ್ದಾರೆ.
ಕನ್ನಡ ಕಿರುಚಿತ್ರಗಳಿಗೆ ವೇದಿಕೆಯಾಗುವಂತೆ ‘ಕರ್ನಾಟಕ ಮಿನಿ ಚಲನ ಚಿತ್ರೋತ್ಸವ’ವನ್ನು ವಿವಿಧೆಡೆಗಳಲ್ಲಿ ನಡೆಸಿಕೊಟ್ಟು ಸಿನಿಮಾ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಮಾರು 20ವರ್ಷಗಳ ಹಿಂದೆಯೇ ಆದಿಗ್ರಾಮೋತ್ಸವ ಪರಿಕಲ್ಪನೆಯಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದು, ಮೊತ್ತಮೊದಲ ಬಾರಿಗೆ ಹೋಟೆಲ್ ಕಾರ್ಮಿಕರಿಗಾಗಿ ಮುಂಬೈಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಮುಂಬಯಿಯ ಪೊವಾಯಿಯಲ್ಲಿ ಕನ್ನಡ ಸಂಘ ಸ್ಥಾಪನೆ ಮಾಡಿದ್ದು ಇವೆಲ್ಲದರಲ್ಲಿ ಅವರ ಸಾಮಾಜಿ ಕಾಳಜಿ ಹಾಗೂ ನಾಡುನುಡಿ ಪ್ರೇಮ ವ್ಯಕ್ತವಾಗುತ್ತದೆ.
‘ಬೆಳದಿಂಗಳ ಸಾಹಿತ್ಯ ಸಮ್ಮೇಳನ’ವೆಂಬ ವಿನೂತನ ಪರಿಕಲ್ಪನೆಯಲ್ಲಿ ಒಂದು ರಾತ್ರಿಯ ಸಾಹಿತ್ಯ ಸಮ್ಮೇಳನ ನಡೆಸಿ ಕನ್ನಡ ವಿದ್ವತ್ ಪ್ರಪಂಚದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ಸಂಬಂಧಿಸಿ 5 ಕೃತಿಗಳ ರಚನೆ ಮಾಡಿ ಕಂಬಳ ಕ್ರೀಡಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇವೆಲ್ಲವೂ ಸಣ್ಣಪುಟ್ಟ ಕಾರ್ಯಕ್ರಮಗಳಾದರೂ ಹೊಸತನ ಮತ್ತು ನಿರ್ದಿಷ್ಟ ಉದ್ದೇಶದಿಂದ ಅವೆಲ್ಲವುಗಳಿಗೂ ಶ್ರೇಷ್ಠತ್ವ ಪ್ರಾಪ್ತಿಯಾಗಿವೆ.