ಶಿವಮೊಗ್ಗ : ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಕೊಂಕಣಿ ಮತ್ತು ಮರಾಠಿ ಬರಹಗಾರ ಮಹಾಬಲೇಶ್ವರ ಸೈಲ್ ಆಯ್ಕೆಯಾಗಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ರೂ.5 ಲಕ್ಷ ನಗದು ಹಾಗೂ ಬೆಳ್ಳಿಯ ಪದಕವನ್ನು ಪ್ರಶಸ್ತಿಯು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಕುವೆಂಪು ಅವರ ಜನ್ಮದಿನವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ನಡೆಯಲಿದೆ.
ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಇವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಕೊಂಕಣಿ ಭಾಷಾ ಸಾಹಿತಿಗಳೂ ಅನುವಾದಕ ಶಾ.ಮಂ. ಕೃಷ್ಣರಾಯ, ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಮತ್ತು ಪ್ರತಿಷ್ಠಾನದ ಕಾರ್ಯದ ಕಡಿದಾಳ್ ಪ್ರಕಾಶ್ ಸಮಿತಿಯ ಸಂಚಾಲಕರಾಗಿದ್ದರು.
ಕೊಂಕಣಿ ಭಾಷಾ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿ, ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವರ್ತಮಾನದ ಬಹುಮಹತ್ವದ ಬರಹಗಾರ ಗೋವಾ ನಿವಾಸಿಯಾಗಿರುವ ಮಹಾಬಲೇಶ್ವರ ಸೈಲ್ ಇವರನ್ನು 2025ರ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 1943ರ ಆಗಸ್ಟ್ 4ರಂದು ಉತ್ತರ ಕನ್ನಡ ಜಿಲ್ಲೆಯ ಮಜಾಲಿ ಭಾಗದ ಶೇಜಭಾಗ್ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಮಹಾಬಲೇಶ್ವರ ಸೈಲ್ ತಂದೆಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು ಎಂಟನೇ ತರಗತಿಗೆ ವಿದ್ಯಾಭಾಸ ನಿಲ್ಲಿಸಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ ಗೋವಾದಲ್ಲಿ ಅರಣ್ಯ, ಪೊಲೀಸ್ ಹಾಗೂ ಅಂಚೆ ಇಲಾಖೆಗಳಲ್ಲೂ ಸೇವೆ ಸಲ್ಲಿಸಿ ಪ್ರಸ್ತುತ ಅಲ್ಲಿಯೇ ನೆಲೆಸಿದ್ದಾರೆ. ಸೈಲ್ ಇವರ ಕಾದಂಬರಿ ‘ಹಾವಟಣ್’ಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ ಪುರಸ್ಕಾರ ದೊರೆತಿದೆ. ಇವರ ರಚನೆಯ ‘ತರಂಗಂ’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಗೋವಾ ಸರ್ಕಾರದ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.
