ಹಾಸನ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಇದರ ವತಿಯಿಂದ ದಿನಾಂಕ 02 ನವೆಂಬರ್ 2025ರ ಭಾನುವಾರದಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳುವ ದಶಮಾನೋತ್ಸವ ಹಾಗೂ ರಾಜ್ಯಮಟ್ಟದ ಕವಿ-ಕಾವ್ಯ ಸಂಭ್ರಮದ ಸರ್ವಾಧ್ಯಕ್ಷರನ್ನಾಗಿ ಮುಂಬಯಿಯ ಸಾಹಿತಿ, ಸಂಘಟಕಿ ವಾಣಿ ಶೆಟ್ಟಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ನಿಕಟಪೂರ್ವ ಸಂಭ್ರಮಗಳ ಸರ್ವಾಧ್ಯಕ್ಷರಾದ ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಅಮರೇಶ್ ಪಾಟೀಲ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಸಾಹಿತಿಗಳಾದ ನಾಗರಾಜ್ ದೊಡ್ಡಮನಿ, ಡಾ. ಎಚ್.ಕೆ. ಹಸೀನಾ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಪಿ. ದಿವಾಕರ ನಾರಾಯಣ, ದೇಸು ಆಲೂರು ಇವರನ್ನೊಳಗೊಂಡ ಸಮಿತಿ ವಾಣಿ ಶೆಟ್ಟಿಯವರು ಹೊರನಾಡಿನಲ್ಲಿದ್ದುಕೊಂಡು ಕನ್ನಡ ಸಾಹಿತ್ಯ ಮತ್ತು ಸಂಘಟನೆಗೆ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಪರಿಗಣಿಸಿ ದಶಮಾನೋತ್ಸವದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ವಾಣಿ ಶೆಟ್ಟಿಯವರ ಪರಿಚಯ :
ವಾಣಿ ಶೆಟ್ಟಿಯವರು ಮೂಲತಃ ಮೂಡಬಿದ್ರಿಯವರು. ತಂದೆ ವಾಸು ಶೆಟ್ಟಿ (ಕಾಪು) ಬಸರಿಕಟ್ಟೆ ಕಾಫಿ ಪ್ಲಾಂಟರ್, ತಾಯಿ ಸೀತಾ ಶೆಟ್ಟಿ ಪುನರ್ ಗುತ್ತು. ಇವರ ಚೊಚ್ಚಲ ಕವನ ಸಂಕಲನ ‘ಅಮ್ಮ’ ಪ್ರಕಟಿತ ಕೃತಿ. ಇವರ ಕವನ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಾಣಿ ಶೆಟ್ಟಿಯವರ ಸಾಹಿತ್ಯ ಬದುಕಿನ ಚಿತ್ರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲೇಖಕೀಯರ ಸಂಘ ಬೆಂಗಳೂರು ಇವರ ಸಂಯೋಜನೆಯಲ್ಲಿ ‘ನನ್ನ ಕವಿತೆ ನನ್ನ ಹಾಡು’ ಎಂಬ ಸಾಕ್ಷ್ಯಚಿತ್ರ ನಿರ್ಮಿತವಾಗಿದೆ. ಉಡುಪಿಯಲ್ಲಿ ನಡೆದ ವಿಶ್ವ ಬಹುಭಾಷಾ ಕವಿ-ಸಾಹಿತ್ಯ ಸಮ್ಮೇಳನ, ಮಂಗಳೂರು, ಬೆಳಗಾವಿ, ಧಾರವಾಡ, ಮಂಡ್ಯ, ವಾಫಿ ಸಹಿತ, ಕರ್ನಾಟಕ –ಮಹಾರಾಷ್ಟ್ರದ ವಿವಿಧೆಡೆ ಜರಗಿದ ಕವಿಗೋಷ್ಠಿಗಳಲ್ಲಿ ಇವರು ಭಾಗವಹಿಸಿದ್ದಾರೆ ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಈಗಾಗಲೇ ಕನಕ ಪ್ರಕಾಶನ, ಬೆಳಗಾವಿ ಇವರು ನಡೆಸಿದ ‘ಅಖಿಲ ಕರ್ನಾಟಕ ಪ್ರಥಮ ಕವಿ ಸಮ್ಮೇಳನ’ದಲ್ಲಿ ಇವರಿಗೆ ‘ಕನಕ ಶ್ರೀ ಸಾಹಿತ್ಯ ಪ್ರಶಸ್ತಿ’ ಹಾಗೂ ‘ಕನ್ನಡ ರತ್ನ ರಾಜ್ಯ ಪ್ರಶಸ್ತಿ’, ಮಂದಾರ ಕಲಾವಿದರ ವೇದಿಕೆ (ರಿ.) ಬೀದರ್ ಇವರ ‘ಕಾವ್ಯ ಪ್ರಭಾಂಜಲಿ’ ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಇವರು ‘ಹೊಯ್ಸಳ ಸಾಹಿತ್ಯ ಪ್ರಶಸ್ತಿ’, ಕಥಾ ಬಿಂದು ಪ್ರಕಾಶನ ಇವರು ‘ಭಾರತ ಕಲಾ ಭೂಷಣ’ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ಕನ್ನಡ ‘ನುಡಿಸಿರಿ ಪ್ರಶಸ್ತಿ’ ಮಂಗಳೂರಿನ ಕಾವೂರ್ ಲಯನ್ಸ್ ಕ್ಲಬ್ ಇವರು ‘ಸಾಹಿತ್ಯ ರತ್ನಾ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಾಣಿಯವರು ಸಾಹಿತ್ಯವಲ್ಲದೆ ನಾಟಕ, ಯಕ್ಷಗಾನ, ತಾಳಮದ್ದಳೆ, ನೃತ್ಯಗಳಲ್ಲಿಯೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಗೂಗಲ್ ಮೀಟ್ ನಲ್ಲಿಯು ಕವಿಗೋಷ್ಠಿ, ನಿರೂಪಣೆಯನ್ನು ನಡೆಸಿಕೊಡುತ್ತೀದ್ದಾರೆ. ವೃತ್ತಿಯಲ್ಲಿ ಇವರು ಕೊಟಕ್ ನಲ್ಲಿ ಕೆಲಸ ಹಾಗೂ ಜಾಹಿರಾತುಗಳಿಗೆ ಕಂಠ ದ್ವನಿ ನೀಡುತ್ತಿದ್ದಾರೆ. ಗೋರೆಗಾಂವ್ ಕರ್ನಾಟಕ ಸಂಘದ ರಂಗಸ್ಥಳದ ನಿರ್ದೆಶಕಿಯಾಗಿ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಗೌ.ಪ್ರ. ಕಾರ್ಯದರ್ಶಿಯಾಗಿ, ಜೋಗೇಶ್ವರಿ ದೈಹಿಸರ್ ಬಂಟರ ಸಂಘದ ಕಮಿಟಿ ಸದಸ್ಯರಾಗಿ, ಸೃಜನಬಳಗದ ಮಾಜಿ ಗೌ.ಪ್ರ. ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹೊರನಾಡ ಘಟಕ ಮುಂಬಯಿ (ಮಹಾರಾಷ್ಟ್ರ) ಇದರ ಗೌ.ಪ್ರ. ಕಾರ್ಯದರ್ಶಿಯಾಗಿಯೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಮುಂಬಯಿಯ ಗೋರೆ ಗಾಂವ್ ನಲ್ಲಿ ವಾಸಿಸುತ್ತಿದ್ದಾರೆ.