ಬೆಂಗಳೂರು : ಕನ್ನಡ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ, ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡು ಬಂದಿದ್ದ ಡಾ. ಪಿ. ವಿ. ನಾರಾಯಣ ಇವರು ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡಪರ ಹೋರಾಟಗಾರರು. ಕನ್ನಡದ ಹಿರಿಮೆಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸಿದ ಇವರ ಅಗಲುವಿಕೆಯಿಂದ ಕನ್ನಡ ವಿದ್ವತ್ ಲೋಕಕ್ಕೆ ಅಪಾರ ಹಾನಿಯಾಗಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಇವರು ದಿನಾಂಕ 03 ಏಪ್ರಿಲ್ 2025 ರಂದು ನಿಧನರಾದ ಡಾ. ಪಿ. ವಿ. ನಾರಾಯಣ ಅವರ ಜಯನಗರದ ಸ್ವಗೃಹಕ್ಕೆ ಭೇಟಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವವನ್ನು ಸಲ್ಲಿಸಿದರು.
ಪಿ. ವಿ. ನಾರಾಯಣರು 1942ರ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಿ. ವೆಂಕಪ್ಪಯ್ಯ ತಾಯಿ ನರಸಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ನಡೆಸಿದ ಇವರು, ತುಮಕೂರಿನ ಸರಕಾರಿ ಕಾಲೇಜಿನಿಂದ ಬಿ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಗಳಿಸಿದರು. ಪಿ.ವಿ. ನಾರಾಯಣ ರೂರಲ್ ಇನ್ಸ್ಟಿಟ್ಯೂಟ್ ಹನುಮನಮಟ್ಟಿ, ವಿದ್ಯೋದಯ ಹೈಸ್ಕೂಲ್ ಟಿ. ನರಸೀಪುರ, ಅದೋನಿಯ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಮುಂತಾದುವುಗಳಲ್ಲಿ ಬೋಧನಾನುಭವ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಎಂ. ಎ. (ಸಂಜೆ) ತರಗತಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂ.ಎ. ತರಗತಿಗಳಿಗೆ ಬೋಧನೆ ಮಾಡಿದರು. ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಕಟವರ್ತಿಗಳಾದ ಇವರು ವಿಜಯ ಕಾಲೇಜು ಬೃಹತ್ತಾಗಿ ಬೆಳೆಯುವಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಬಂಧವನ್ನು ಇಟ್ಟು ಕೊಂಡಿದ್ದ ಡಾ.ಪಿ.ವಿ.ನಾರಾಯಣ ಅವರು ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಇವರು ‘ಕುಮುದೇಂದು ರಾಮಾಯಣ’, ‘ಪದ್ಮಿನಿ ಪರಿಣಯ’, ‘ಸುವರ್ಣ ಭಾರತಿ’ ಕೃತಿಗಳನ್ನು ಪರಿಷತ್ತಿಗಾಗಿ ಸಂಪಾದಿಸಿ ಕೊಟ್ಟಿದ್ದರು. ಇವರು ಸಂಪಾದಿಸಿದ ‘ಚಂಪೂ ನುಡಿಗನ್ನಡಿ’, ‘ಹಳೆಗನ್ನಡ ಪದ ಸಂಪದ’ಗಳು ಪರಿಷತ್ತಿನ ಜನಪ್ರಿಯ ಪ್ರಕಟಣೆಗಳಾಗಿದ್ದು, ಹಲವು ಮುದ್ರಣಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದಾರೆ. ಪರಿಷತ್ತಿನ ಬೆಳವಣಿಗೆ ಕುರಿತು ಸದಾ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಕನ್ನಡ ಶಕ್ತಿ ಕೇಂದ್ರದ ಪ್ರಧಾನ ಸಂಚಾಲಕರಾಗಿ, ಸಾಹಿತಿ ಕಲಾವಿದರ ಬಳಗದ ಸಂಚಾಲಕರಾಗಿ, ಕನ್ನಡ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದವರು. ಸಾಹಿತ್ಯ ಸಂಬಂಧಿತ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧ ಮಂಡನೆ ಮಾಡಿದ್ದು, ಬಿ. ಎಂ. ಶ್ರೀ ಪ್ರತಿಷ್ಠಾನ ಮತ್ತು ಉದಯಭಾನು ಕಲಾ ಸಂಘ ಸಂಸ್ಥೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇವರು ಬಿ. ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
Subscribe to Updates
Get the latest creative news from FooBar about art, design and business.
Previous Article‘ಮಹಾಪರ್ವ’ ಗ್ರಂಥ ಲೋಕಾರ್ಪಣೆ | ಎಪ್ರಿಲ್ 4