ತುಮಕೂರು: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡಮಾಡುವ 2024ನೇ ಸಾಲಿನ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಗೊ. ರು. ಚನ್ನಬಸಪ್ಪ ಆಯ್ಕೆ ಆಗಿದ್ದಾರೆ.
ಪ್ರಶಸ್ತಿಯು ರೂಪಾಯಿ ಒಂದು ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಸಿದ್ಧಗಂಗಾ ಮಠದಲ್ಲಿ 21 ಜನವರಿ 2025ರಂದು ನಡೆಯುವ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕವಿ, ವಿದ್ವಾಂಸ, ಬರಹಗಾರ ಹಾಗೂ ಕನ್ನಡ ಜಾನಪದ ತಜ್ಞರಾದ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಇವರು ರುದ್ರಪ್ಪ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ 1930ರಲ್ಲಿ ಚಿಕ್ಕಮಗಳೂರಿನ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಮಂಡ್ಯದ ನಿಡಗಟ್ಟದ ಶಾಲೆಯೊಂದರಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಸರ್ಕಾರಿ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಜಾನಪದ ಮತ್ತು ವಚನ ಸಾಹಿತ್ಯದ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಇವರು ‘ಸಾಕ್ಷಿಕಲ್ಲು’, ‘ಹೊನ್ನ ಬಿಟ್ಟೆವು ಹೊಲಕೆಲ್ಲ’,’ಕರ್ನಾಟಕ ಪ್ರಗತಿಪಥ’, ‘ಚೆಲುವಾಂಬಿಕೆ’, ‘ಕುಣಾಲ’, ‘ಬಾಗೂರು ನಾಗಮ್ಮ ಗ್ರಾಮ ಗೀತೆಗಳು’, ’ಸದಾಶಿವ ಶಿವಾಚಾರ್ಯ’, ‘ವಿಭೂತಿ’, ’ಕರ್ನಾಟಕ ಜಾನಪದ ಕಲೆಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
‘ನಾಡೋಜ’, ‘ರಾಷ್ಟ್ರೀಯ ಬಸವ ಪುರಸ್ಕಾರ’ ಹಾಗೂ ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ’ಪ್ರಶಸ್ತಿ ಪುರಸ್ಕೃತರಾದ ಇವರು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಗೊರುಚ ಅವರು ಜಾನಪದ ಹಾಗೂ ಶರಣ ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’