ಹೆಸರಾಂತ ಕಾದಂಬರಿಗಳನ್ನು ಹಾಗೂ ಕಥಾ ಸಂಕಲನಗಳನ್ನು ಬರೆದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕಾದಂಬರಿಗಳ ಸುಪ್ರಸಿದ್ಧ ಲೇಖಕಿ ಶ್ರೀಮತಿ ಎಂ.ಕೆ. ಇಂದಿರಾ.
ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ದಿನಾಂಕ 05.01.1917ರಂದು ಜನಿಸಿದರು. ಇವರ ತಂದೆ ತರೀಕೆರೆ ಸೂರ್ಯನಾರಾಯಣರಾವ್ ಹಾಗೂ ತಾಯಿ ಬನಶಂಕರಮ್ಮ. ಆಗಿನ ಕಾಲದ ಜೀವನ ವಿಧಾನದ ಪ್ರಕಾರ ಎಂ. ಕೆ. ಇಂದಿರಾ ಅವರಿಗೆ 12ನೇ ವಯಸ್ಸಿನಲ್ಲಿ ಶ್ರೀಯುತ ಕೃಷ್ಣರಾವ್ ರೊಂದಿಗೆ ಬಾಲ್ಯ ವಿವಾಹ ನಡೆಯುತ್ತದೆ. ಈ ಕಾರಣದಿಂದಲೇ ಅವರು ಕೇವಲ ಆರನೆಯ ತರಗತಿ ತನಕ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ.
ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಕೃತಿಗಳನ್ನು ನೀಡಿದ ಮಹಾನ್ ಲೇಖಕಿಯಾದ ಶ್ರೀಮತಿ ಎಂ. ಕೆ. ಇಂದಿರಾ ಇವರಿಗೆ ಸಾಹಿತ್ಯ ರಚನೆಯ ಕಾರ್ಯದಲ್ಲಿ ಅವರ ಶೈಕ್ಷಣಿಕ ವ್ಯವಸ್ಥೆ ಯಾವುದೇ ರೀತಿಯ ಕೊರತೆಯನ್ನು ತಂದೊಡ್ಡಲಿಲ್ಲವೆಂಬುದು ನಿರ್ವಿವಾದ. ಮುಖ್ಯವಾಗಿ ಅವರು ಬಾಳಿ ಬದುಕಿದ ಕುಟುಂಬದಲ್ಲಿ ಹೆಚ್ಚಿನವರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದರು. ಇವರ ತಾಯಿ ಬನಶಂಕರಮ್ಮ ಹಾರ್ಮೋನಿಯಂ, ಗಮಕ ಹಾಡುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಪ್ರಸಿದ್ಧ ಶಿಶು ಸಾಹಿತಿ ಅನಂತ ಶರ್ಮ ಇವರು ಇಂದಿರಾ ಇವರ ಸೋದರಮಾವ. ಪ್ರಜಾವಾಣಿಯ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್ ರಾಮಚಂದ್ರರಾವ್ ಸ್ವಂತ ಸಹೋದರರಾಗಿದ್ದರು. ಆಕಾಶವಾಣಿಯ ನಿರ್ದೇಶಕರಾಗಿದ್ದ ಡಾ॥ ಎಚ್. ಕೆ. ರಂಗನಾಥ್ ಇವರ ಹತ್ತಿರದ ಸಂಬಂಧಿ.
ಹೀಗೆ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಒಡನಾಟದ ಸಹವಾಸವು ಇವರ ಬರವಣಿಗೆಗೆ ಪೂರಕವಾಗಿತ್ತು. ಅಷ್ಟೇ ಅಲ್ಲದೆ ಅಪಾರವಾದ ಜೀವನಾನುಭವವನ್ನು ಇವರು ಹೊಂದಿದ್ದರು.
ಸಣ್ಣ ಪ್ರಾಯದಲ್ಲಿ ವಿವಾಹವಾಗಿ ಎಂಟು ಮಕ್ಕಳನ್ನು ಹಡೆದಿದ್ದರೂ ಅದರಲ್ಲಿ ಮೂರು ಮಕ್ಕಳು ವಿವಿಧ ಕಾರಣಗಳಿಂದ ಇಹವನ್ನು ತ್ಯಜಿಸಿದರು. ಹೀಗೆ ಅವರ ಬದುಕಿನ ಜೊತೆ ಸುಖಕ್ಕಿಂತ ದುಃಖವೇ ಅಧಿಕವಾಗಿತ್ತು. ಅವರ ಪತಿಯವರು ಶಿಸ್ತಿನ ಸಿಪಾಯಿಯಾಗಿದ್ದರು. ಹೀಗೆ ಅನೇಕ ಸಂಕಷ್ಟಗಳ ಮಧ್ಯೆ ತಮ್ಮ 47ನೇ ವಯಸ್ಸಿನಲ್ಲಿ ಎಂ. ಕೆ. ಇಂದಿರಾ ಅವರು ಸಾಹಿತ್ಯ ಕೃಷಿಯನ್ನು ಆರಂಭಿಸಿದರು. ಓರ್ವ ಹೆಣ್ಣು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇಂದಿರಾ ಅವರೇ ಸಾಕ್ಷಿ.
ಇವರು ಬರೆಯಲು ಆರಂಭಿಸಿದ್ದು ತಡವಾದರೂ ಒಟ್ಟು 64 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅದರಲ್ಲಿ 50 ಕಾದಂಬರಿಗಳು, 10 ಕಥಾ ಸಂಕಲನಗಳು, ಎರಡು ಜೀವನ ಚರಿತ್ರೆಗಳು, ಒಂದು ಪ್ರವಾಸ ಕಥನ, ಒಂದು ಚಲನ ಚಿತ್ರಕ್ಕೆ ಸಂಬಂಧಿಸಿದ ಚಿತ್ರ ಭಾರತ. ಇವರ ಕೆಲವು ಕಾದಂಬರಿಗಳು ಚಲನಚಿತ್ರಗಳಾಗಿ ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಅವುಗಳಲ್ಲಿ ಮುಖ್ಯವಾದದು ಗೆಜ್ಜೆಪೂಜೆ, ಮುಸುಕು, ಫಣಿಯಮ್ಮ, ಸದಾನಂದ, ಗಿರಿ ಬಾಲೆ, ಹೂಬಾಣ, ಪೂರ್ವಾಪರ, ನೂರೊಂದು ಬಾಗಿಲು ಮುಂತಾದವು. ಇವರ ಹೆಚ್ಚಿನ ಕೃತಿಗಳಲ್ಲಿ ಹೆಣ್ಣಿನ ಸ್ಥಿತಿ ಗತಿ, ವಿಧವಾ ಸಮಸ್ಯೆ, ವೇಶ್ಯೆಯರ ಪಾಡು, ಜಾತಿ ಸಮಸ್ಯೆ, ಮುಂತಾದ ಮಧ್ಯಮ ವರ್ಗದ ಜನರ ಸ್ಥಿತಿಗತಿಗಳು ಅನಾವರಣಗೊಂಡಿವೆ. ಇವರ ಬರವಣಿಗೆಯ ಶೈಲಿ ಬಹಳ ಆಕರ್ಷಣೀಯ. ಮಲೆನಾಡು ಪ್ರದೇಶದ ತೀರ್ಥಹಳ್ಳಿಯಲ್ಲಿ ಜನಿಸಿದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಎಂ. ಕೆ. ಇಂದಿರಾ ಇವರು ತಮ್ಮದೇ ಪ್ರಾದೇಶಿಕ ಭಾಷೆಯನ್ನೇ ಬಳಸಿಕೊಂಡು ಹೆಚ್ಚಿನ ಕೃತಿಗಳನ್ನು ರಚಿಸಿರುವುದು ಗಮನಾರ್ಹ ಅಂಶ.
ಅನೇಕ ಪ್ರಶಸ್ತಿ ಬಹುಮಾನಗಳು ಇವರಿಗೆ ಲಭಿಸಿವೆ. ‘ಸಾವಿತ್ರಮ್ಮ ದೇ. ಜ. ಗೌ. ಪ್ರಶಸ್ತಿ’, ‘ಕರ್ನಾಟಕ ಅಕಾಡೆಮಿ ಪ್ರಶಸ್ತಿ’, ‘ಸುರಗಿ ಅಭಿನಂದನಾ ಗ್ರಂಥ’ ಸಮರ್ಪಣೆ ಮುಂತಾದ ಪ್ರಶಸ್ತಿ ಗೌರವಗಳನ್ನು ಪಡೆದ ಇವರು ಓದುಗರ ಅಚ್ಚುಮೆಚ್ಚಿನ ಲೇಖಕಿ. ಶ್ರೀಯುತ ಪುಟ್ಟಣ್ಣ ಕಣಗಾಲ್ ಇವರ ನಿರ್ದೇಶನದಲ್ಲಿ ಇವರ ‘ಗೆಜ್ಜೆಪೂಜೆ’ ಕಾದಂಬರಿ ಅತ್ಯಂತ ಜನಪ್ರಿಯ ಕೃತಿಯೆಂಬ ಮನ್ನಣೆಯನ್ನು ಪಡೆಯುತ್ತದೆ. ಪ್ರಜಾವಾಣಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಎಂಟು ಮುದ್ರಣ ಕಂಡ ಈ ಕೃತಿ ಅತ್ಯಂತ ಯಶಸ್ವಿ ಚಲನಚಿತ್ರವಾಗಿ ಪ್ರಸಿದ್ಧಿ ಪಡೆಯಿತು. ರಷ್ಯಾದ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡು ಜನಮನ್ನಣೆಗಳಿಸಿತ್ತು. ಗುಜರಾತಿ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ಇದು ಚಲನಚಿತ್ರವಾಗಿ ಇವರ ಗೌರವವನ್ನು ಹೆಚ್ಚಿಸಿದೆ. ಆ ಕಾಲದಲ್ಲಿ ಹೆಚ್ಚು ಪ್ರಚಲಿತವಿದ್ದ ದೇವದಾಸಿ ಪದ್ಧತಿ ಅಂದರೆ ವೇಶ್ಯಾವಾಟಿಕೆಯ ಕೆಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಚಿಸಿದ ಕೃತಿ ‘ಗೆಜ್ಜೆಪೂಜೆ’. ಮಿನುಗುತಾರೆ ಕಲ್ಪನಾ ಅವರ ಅದ್ಭುತವಾದ ನಟನೆಯೊಂದಿಗೆ ಈ ಸಿನಿಮಾ ಜನರನ್ನು ತಲುಪುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ ಇದು ಅವರಿಗೆ ಅತ್ಯುತ್ತಮ ಕಾದಂಬರಿಕಾರ್ತಿ ಎಂಬ ಹೆಸರನ್ನು ತಂದು ಕೊಟ್ಟಿತು. ಒಂದು ಕಾಲದಲ್ಲಿ ಸ್ತ್ರೀಯರಿಗೆ ಶಿಕ್ಷಣವನ್ನು ಕೊಡುವ ಸೂಕ್ತ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಆಗಿನ ಎರಡನೇ ಇಯತ್ತೆ ಅಂದರೆ ಈಗಿನ ಆರನೇ ತರಗತಿಯ ತನಕ ಶಿಕ್ಷಣವನ್ನು ಪಡೆದು 12ನೇ ವಯಸ್ಸಿಗೆ ವಿವಾಹಿತರಾಗಿ ಎಂಟು ಮಕ್ಕಳನ್ನು ಹೆತ್ತು ಪಾಲನೆ ಮಾಡಿ ಇದೇ ಸಂದರ್ಭದಲ್ಲಿ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಲೋಕೋತ್ತರವಾದ ಸುಪ್ರಸಿದ್ಧ ಕಾದಂಬರಿಗಳನ್ನು ಹಾಗೂ ಕಥಾಸಂಕಲನಗಳನ್ನು ರಚಿಸಿ ಮರೆಯಾದ ಮಾಣಿಕ್ಯವೇ ಶ್ರೀಮತಿ ಎಂ. ಕೆ. ಇಂದಿರಾ!!
ಸುಮಾರು 77 ವರುಷಗಳ ಕಾಲ ಬದುಕಿದ ಇವರು 15.03.1994 ರಂದು ನಮ್ಮನ್ನು ಅಗಲಿದ್ದಾರೆ. “ಅಳಿಯುವುದು ಈ ಕಾಯ, ಉಳಿಯುವುದು ಕೀರ್ತಿ” ಎಂಬಂತೆ ಅತ್ಯಮೂಲ್ಯ ಸಾಹಿತ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿ ಮರೆಯಾದ ನಕ್ಷತ್ರ, ಸದಾ ಕಾಲ ತಮ್ಮ ಅಪ್ರತಿಮ ಪ್ರತಿಭೆ ಹಾಗೂ ಕ್ರಿಯಾಶೀಲ ಬರಹಗಳಿಂದ ಅಂದು ಇಂದು ಮುಂದೆಂದೂ ಸಾಹಿತ್ಯ ಲೋಕದ ಶ್ರೇಷ್ಠ ತಾರೆಯಾಗಿ ಮಿನುಗುತ್ತಾ ಇರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅವರ ಜನ್ಮದಿನವಾದ ಇಂದು ಆ ಚೇತನಕ್ಕೆ ಈ ಮೂಲಕ ಗೌರವವನ್ನು ಸಮರ್ಪಿಸುತಿದ್ದೇನೆ.
ನಳಿನಾಕ್ಷಿ ಉದಯರಾಜ್
ನಿವೃತ್ತ ಶಿಕ್ಷಕಿ ಹಾಗೂ ಲೇಖಕಿ
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತೆ.ಇವರ ಒಟ್ಟು ಆರು ಸಾಹಿತ್ಯ ಕೃತಿಗಳು ಲೋಕಾರ್ಪಣೆಗೊಂಡಿವೆ.