ಮಂಗಳೂರು : ಮಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಖ್ಯಾತ ಯಕ್ಷಗಾನ ಕಲಾವಿದರಾದ ದಿ. ಮುಳಿಯ ಮಹಾಬಲ ಭಟ್ ಇವರ ಪತ್ನಿ ಸಾಹಿತಿ ಮನೋರಮಾ ಎಂ. ಭಟ್ ದಿನಾಂಕ 15 ಸೆಪ್ಟೆಂಬರ್ 2024ರಂದು ನಿಧನರಾದರು. ಇವರಿಗೆ 92 ವರ್ಷ ವಯಸ್ಸಾಗಿತ್ತು.
ಹೋರಾಟಗಾರ್ತಿ, ಖ್ಯಾತ ಸಾಹಿತಿ, ಕಥೆಗಾರ್ತಿ, ಆಕಾಶವಾಣಿ ಕಲಾವಿದೆಯಾಗಿದ್ದ ಮನೋರಮಾ ಭಟ್ ಸಣ್ಣಕತೆಗಾರ್ತಿಯಾಗಿ ಸಾಹಿತ್ಯಕ್ಷೇತ್ರ ಪ್ರವೇಶಿಸಿದವರು. ಸ್ವಯಂವರ (ಸಣ್ಣಕಥಾ ಸಂಕಲನ), ಆಯ್ಕೆ (ಬಾನುಲಿ ನಾಟಕ ಸಂಕಲನ), ನಿರ್ಧಾರ, ಹೊಸಹಾದಿ, ನೀನು ಮತ್ತು ನಾನು, ಋಣಾನುಬಂಧ, ಚಂದ್ರಮತಿಯ ಕನಸು, ಬಲಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಇವರು ಬಳಿಕ ಅಧ್ಯಕ್ಷರೂ ಆಗಿದ್ದರು.
ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚು ಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ಇವರು, ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಇವರ ಸಾಹಿತ್ಯ ಸಾಧನೆಗೆ ಸಂದ ಗೌರವಗಳು. ಇವರು ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.