ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಮೋದ್ ಮುತಾಲಿಕ್ (68) ಅವರು ನಗರದಲ್ಲಿ ನಿಧನರಾಗಿದ್ದಾರೆ.
ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಮೋದ್ ಮುತಾಲಿಕ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಅವರಿಗೆ ಒಬ್ಬ ಪುತ್ರ ಮತ್ತು ಪತ್ನಿ ಇದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರಾದ ಪ್ರಮೋದ್ ಮುತಾಲಿಕ್ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಆಂಗ್ಲ ಭಾಷೆಯ ಅಧ್ಯಾಪಕರಾಗಿ, ಕೆಲ ವರ್ಷಗಳ ಕಾಲ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದುಕೊಂಡಿದ್ದರು.
ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಮುತಾಲಿಕ್ ಅವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದರು. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಚಿನು ಅಂಬೆಯ Things fall apart, ಆರ್.ಕೆ. ನಾರಾಯಣ್ ಅವರ ದಿ ಗೈಡ್, ಸ್ಕಾಟ್ ಫಿಜರಾಲ್ಡ್ ರವರ ಗ್ರೇಟ್ ಗ್ಯಾಟ್ಸ್’ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗತ್ತಿನ ಅಪರೂಪದ ಕಥೆಗಳನ್ನು ಕನ್ನಡಕ್ಕೆ ಕಣಜ ಎಂಬ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿ, ಹೆಚ್. ನರಸಿಂಹಯ್ಯನವರ ಆತ್ಮಕಥೆ, ತ.ರಾ.ಸು ಅವರ ಹಂಸಗೀತೆ ಕಾದಂಬರಿ, ಯಶವಂತಚಿತ್ತಾಲದ ಕಥೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ.