ಕನ್ನಡ ಕಾವ್ಯದ ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ಆತಂಕ ಮತ್ತು ಸಂತೋಷಗಳು ಒಟ್ಟಿಗೇ ಉಂಟಾಗುತ್ತವೆ. ಕನ್ನಡದಲ್ಲಿ ಈಗ ಬಹಳಷ್ಟು ಜನ ಕವಿತೆಗಳನ್ನು ಬರೆಯುತ್ತಿದ್ದಾರೆ. ಕವಿತೆ ಓದುವವರಿಗಿಂತ ಬರೆಯುವವರೇ ಹೆಚ್ಚಾಗಿದ್ದಾರೆ ಎಂಬ ಮಾತಿನಲ್ಲಿ ಉತ್ಪೇಕ್ಷೆಯಿಲ್ಲ. ಈ ರೀತಿಯಲ್ಲಿ ಬರೆಯುತ್ತಿರುವ ಕನ್ನಡದ ಕವಿ, ಕವಿಯತ್ರಿಯರ ನಡುವೆ ಶ್ರೀಮತಿ ಸೌಮ್ಯ ಪ್ರವೀಣ್ ಅವರು ತಮ್ಮ ಮೊದಲ ಕವನ ಸಂಕಲನ ‘ಹೀಗೊಂದು ಭಾವ’ದ ಮೂಲಕ ಗಮನವನ್ನು ಸೆಳೆಯುತ್ತಾರೆ. ಗೃಹಿಣಿಯಾಗಿ, ತಾಯಿಯಾಗಿ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ, ದಿನನಿತ್ಯದ ಕೆಲಸಗಳ ನಡುವೆಯೂ ಬರವಣಿಗೆಗೆ ಸಮಯವನ್ನು ಹೊಂದಿಸಿಕೊಂಡದ್ದು ಸಣ್ಣ ಸಂಗತಿಯಲ್ಲ. ಆ ಪೈಕಿ ಆಯ್ದ ನಲುವತ್ತೆಂಟು ಕವಿತೆಗಳ ಗುಚ್ಛವನ್ನು ‘ಹೀಗೊಂದು ಭಾವ’ ಎಂಬ ಹೆಸರಿನಲ್ಲಿ ಓದುಗರಿಗೆ ನೀಡಿದ್ದಾರೆ.
ಬದುಕಿನ ಮುಖ್ಯ ಆಸರೆಯಾದ ಪ್ರೀತಿಗೆ ಆದ್ಯತೆಯನ್ನು ನೀಡುವ ಸೌಮ್ಯ ಅವರ ಕವಿತೆಗಳಲ್ಲಿ ಪ್ರೀತಿಯ ವೈವಿಧ್ಯಮಯ ಮುಖಗಳಿವೆ. ತಮ್ಮ ಜೀವನಾನುಭವದ ಹಿನ್ನೆಲೆಯಲ್ಲಿ ಪ್ರೀತಿಯ ಹಲವು ಮುಖಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅನೇಕ ಕವಿತೆಗಳಲ್ಲಿ ಒಲವಿನ ಮುಖಗಳನ್ನು ಕಂಡರಿಸುವ ಹಂಬಲವು ಕಂಡು ಬರುತ್ತದೆ. ಆಳವಾದ ಪ್ರೀತಿ ಮತ್ತು ಅದನ್ನು ಕುರಿತ ಚಡಪಡಿಕೆಯು ಇಲ್ಲಿನ ಕವನಗಳಿಗೆ ಹಿನ್ನೆಲೆಯಾಗಿದೆ. ಬದುಕಿನ ಸಂಕೀರ್ಣ ಅನುಭವ ಪ್ರಪಂಚದ ಹೊಸ್ತಿಲಿಗೆ ಕಾಲಿಡುವ ಉದಯೋನ್ಮುಖ ಬರಹಗಾರರ ಆರಂಭಿಕ ರಚನೆಗಳಲ್ಲಿ ಕಂಡು ಬರುವ ಮುಗ್ಧತೆ ಮತ್ತು ಸ್ನಿಗ್ಧತೆಯ ಚೆಲುವು ಇಲ್ಲಿಯೂ ಕಂಡು ಬರುತ್ತದೆ.
‘ನೀ ಕೊಟ್ಟ ಕೆಂಪು ಗುಲಾಬಿ’ ಎಂಬ ಕವಿತೆಯಲ್ಲಿ
ನನ್ನೊಳಗಿನ ಭಾವ ಕುಸುಮವ
ನೀ ಅರಳಿಸಬೇಕು
ಮನವರಿತು ಜೊತೆಯಾಗೆ ಇನ್ನೇನು ಬೇಕು
ಎನ್ನುವ ನಾಯಕಿಯ ಮಾತುಗಳು ತೋರಿಕೆಯ ಪ್ರೀತಿಯನ್ನು ತಿರಸ್ಕರಿಸಿ ನೈಜ ಪ್ರೀತಿಯನ್ನು ಪುರಸ್ಕರಿಸುತ್ತವೆ. ಬಾನು ಮತ್ತು ಭೂಮಿಯ ಪರಿಕಲ್ಪನೆಯನ್ನು ಇರಿಸಿಕೊಂಡು ಗಂಡು ಹೆಣ್ಣಿನ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುವ ‘ಮಳೆ ಮಾಲೆ’ಗಿಂತ ಅದೇ ವಸ್ತುವನ್ನು ಒಳಗೊಂಡ ‘ಮುಗಿಲ ಮೌನ ರಾಗ’ವು ಚೆನ್ನಾಗಿ ಮೂಡಿ ಬಂದಿದೆ.
ಮುಗಿಲ ಮೌನ ರಾಗದಲ್ಲಿ ಅಳುವ ನದಿಯ ಹಾಡಿದೆ
ಬತ್ತಿ ಹೋದ ನದಿಯ ಕಣ್ಗೆ ಮುಗಿಲು ಮಾತ್ರ ಕಂಡಿದೆ
ಎಂಬ ಸಾಲುಗಳಲ್ಲಿ ಭಾವತೀವ್ರತೆಯು ಮನಮುಟ್ಟುತ್ತದೆ. ‘ತೀಕ್ಷ್ಣ ದೃಷ್ಟಿಯಲ್ಲಿ ಸುಡುವ ರವಿಯ ಕೇಳಲೇನಿದೆ?’ ಎಂಬ ಸಾಲಿನಲ್ಲಿ ಪ್ರಶ್ನಿಸುವ ಮನೋಧರ್ಮ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಬಗೆಯು ಸೂಚಿತವಾಗುತ್ತದೆ.
ಇಲ್ಲಿನ ಕವಿತೆಗಳು ಪ್ರೀತಿ ಪ್ರೇಮಗಳನ್ನು ಮೀರಿ ಸಾಮಾಜಿಕವೆನಿಸಲೂ ಯತ್ನಿಸುತ್ತವೆ. ‘ಅವಕಾಶ’, ‘ಮಹಿಳೆ’, ‘ಜೀವಭಾವ’ ಮುಂತಾದ ರಚನೆಗಳಲ್ಲಿ ಕವಿಯತ್ರಿಯು ತಮ್ಮ ಚಿಂತನೆಯನ್ನು ಸರಳವಾಗಿ ವ್ಯಕ್ತಪಡಿಸುತ್ತಾರೆ. ‘ಆಲಿಸುವವರಿಲ್ಲದೇ’, ‘ಭರವಸೆಯ ಬೆಳಕು’, ‘ಸತಾಯಿಸುವೆ ಏಕೆ’, ‘ಬಾ ಬಿಸಿಲೇ’ ಮೊದಲಾದವುಗಳ ವಸ್ತುಗಳು ವೈಯಕ್ತಿಕ ಸಂಕಟವನ್ನು ಪ್ರತಿನಿಧಿಸುತ್ತಾ ಸಾಮಾಜಿಕ ವಿಚಾರಗಳ ಕಡೆಗೆ ಮುಖ ಮಾಡುತ್ತವೆ. ‘ಖಾಲಿ ಡಬ್ಬದ ಜೊತೆ ಖಾಲಿಯಾಗದ ಕನಸುಗಳು’ ಕವಿತೆಯಲ್ಲಿ ಕಾಯಕನಿಷ್ಠ ತಾಯಿಯ ವ್ಯಕ್ತಿತ್ವದ ಬಗ್ಗೆ ಗೌರವವು ವ್ಯಕ್ತವಾಗುತ್ತದೆ. ಈ ಸಂಕಲನದ ಪ್ರಾತಿನಿಧಿಕ ಕವಿತೆಯಾಗಿರುವ ‘ಅವಳು’ ಎಂಬ ಕವಿತೆಯು ತಾಯಿಯ ಮಾನಸಿಕ ಸ್ಥಿತಿಗತಿಗಳನ್ನು ಹಿಡಿದಿಡುತ್ತದೆ. ನೀರನ್ನು ತರಲೆಂದು ಬಾವಿಗೆ ಹೊರಟ ಹೆಣ್ಣಿನ ಮನಸ್ಸಿನ ಹೊಯ್ದಾಟದ ಮೂಲಕ ಕವಿತೆಯು ಆರಂಭವಾಗುತ್ತದೆ.
ಅವಳು ಎಷ್ಟೋ ಕಥೆಗಳನ್ನು
ಹೇಳಿದ್ದಾಳೆ ಆ ಬಾವಿಯ ಬಳಿ
ನೀರು ಸೇದಲು ಹೋದಾಗ
ಹಗ್ಗದ ಜೊತೆ ಇಳಿಬಿಟ್ಟಿದ್ದಾಳೆ ಕಣ್ಣೀರು
ಹೀಗೆ ಕವಿತೆಯನ್ನು ಸತ್ವಪೂರ್ಣವಾಗಿಸುವ ಪದಗಳು, ವಾಕ್ಯದ ಸಾಲುಗಳು ಆಕೆಯ ಮನದ ಪದರವನ್ನು ಬಿಚ್ಚತೊಡಗುತ್ತವೆ.
ಕಿಡಿಯೊಂದು ಜ್ವಾಲಾಗ್ನಿಯಾದಾಗ
ಹೇಡಿ ಮನ ಬಾವಿಯೊಳಗೆ
ಇಣುಕಿ ನೋಡಿದಾಗ
ತೊಟ್ಟಿಲಲ್ಲಿ ಮಲಗಿದ್ದ ಕಂದಮ್ಮನ ಚಿತ್ರ
ಮಗುವಿಗೆ ತಾನಲ್ಲದೆ ಮತ್ತೆ ಯಾರಿದ್ದಾರೆ ಎಂಬ ಭಾವವು ಆತ್ಮಹತ್ಯೆಯ ನಿರ್ಧಾರವನ್ನು ಇಲ್ಲವಾಗಿಸುತ್ತದೆ. ಮನಸ್ಸು ಆತ್ಮವಿಮರ್ಶೆಯನ್ನು ಮಾಡತೊಡಗುತ್ತದೆ. ತುಂಬಿದ ಕೊಡ ಮೇಲಕ್ಕೆ ಬಂದಾಗ ಮಾತೃ ವಾತ್ಸಲ್ಯವು ಎದೆ ತುಂಬಿ ಬರುತ್ತದೆ. ಮಗು ಎಂಬ ಜೀವಂತ ಜಗತ್ತು ತನ್ನ ಪಾಲಿಗೆ ಇರುವಾಗ ಜೀವವನ್ನು ಕಳೆದುಕೊಳ್ಳುವ ಯೋಚನೆಯನ್ನು ಬಿಟ್ಟು ಬಿಡುತ್ತಾಳೆ. ‘ಕಿರಣ ಮೂಡಿದಾಗ’ ಎಂಬ ಕವಿತೆಯಲ್ಲಿ ಈ ವಿಚಾರವು ಇನ್ನಷ್ಟು ವಾಚ್ಯವಾಗಿದೆ.
ನಿನ್ನ ಮುದ್ದು ಮುಖವು ನನ್ನ
ಮನದ ನೋವ ಮರೆಸಿದೆ
ಮೌನ ಸುಳಿಯುವಾಗಲೆಲ್ಲ
ಮಂದಹಾಸ ತರಿಸಿದೆ
ನನ್ನ ಕಣ್ಣಲಿ ನನ್ನ ಹಣೆಯಲಿ
ಇಳಿವ ಹನಿಗಳ ನಾಚಿಸಿ
ಕಾಲ ಗೆಜ್ಜೆಯ ದನಿಯ ಮೂಡಿಸಿ
ನನ್ನ ಹೊಣೆಗಳ ನೆನಪಿಸಿ
ಇಲ್ಲಿ ಕಿರಣ ಎಂದರೆ ಕವಿಯತ್ರಿಯ ಮಗಳ ಹೆಸರೂ ಆಗಿದ್ದು, ಆಕೆಯು ತನ್ನ ಬಾಳಿಗೆ ಬೆಳಕಾಗಬೇಕೆಂಬ ಆಸೆಯು ಪ್ರತಿಫಲಿಸುತ್ತದೆ. ‘ಒಲವಿಗಾವ ಬಂಧನ’ ಎಂಬ ಕವಿತೆಯ
ಮುದ್ದು ಕಂದ ಜೊತೆಗೆ ಇರಲು
ಬಡತನದ ಬೇಗೆಯಲ್ಲೂ
ಒಲವಿಗಾವ ಬಂಧನ?
ಎಂಬ ಸಾಲುಗಳ ಮೂಲಕ ಬದುಕಿನ ನೆಮ್ಮದಿಯನ್ನು ಕಂಡುಕೊಳ್ಳುತ್ತದೆ.
ಜವಾಬ್ದಾರಿಯನ್ನು ನಿಭಾಯಿಸುವ ನೆಪದಲ್ಲಿ ವಯೋವೃದ್ಧ ತಂದೆತಾಯಿರನ್ನು ಹಂಚಿಕೊಳ್ಳುವ ಮಕ್ಕಳು ಹಿರಿಯ ಜೀವಗಳ ದುಃಖವನ್ನು ಅಲಕ್ಷಿಸುವಷ್ಟು ವ್ಯಾವಹಾರಿಕವಾಗಿರುವಾಗ, ಮಮತೆಯಿಂದ ಸಾಕಿ ಬೆಳೆಸಿದ ಹೆತ್ತವರನ್ನು ತಾತ್ಸಾರದಿಂದ ಕಾಣುವ ಮನೋಭಾವವು ಸಾಮಾನ್ಯವಾಗಿರುವಾಗ, ವೃದ್ಧಾಶ್ರಮದ ನಿವಾಸಿಗಳಾಗಿರುವ ಕಾರಣಕ್ಕಾಗಿ ಪರಸ್ಪರ ಸುಖದುಃಖಗಳನ್ನು ವ್ಯಕ್ತಪಡಿಸುವ ಹಿರಿಯರ ದುಸ್ಥಿತಿಯನ್ನು ಚಿತ್ರಿಸುವ ‘ಬಾಳ ಮುಸ್ಸಂಜೆ’ಯು ನಾವು ಕಳೆದುಕೊಳ್ಳುತ್ತಿರುವ ಮಾನವೀಯ ಮೌಲ್ಯಗಳಿಗೆ ಕನ್ನಡಿಯನ್ನು ಹಿಡಿಯುತ್ತದೆ. ‘ಬಂಡೆಯಂತಾಗುವೆ’ ಎಂಬ ಕವಿತೆಯು ಇದೇ ಆಶಯದ ಮುಂದುವರಿದ ಭಾಗವಾಗಿದೆ. ಬದುಕಿನಲ್ಲಿ ನೊಂದ ಮುದುಕನ ಬಳಿ ಬಂಡೆಯ ಮೂಲಕ
ತೆರೆಗಳಪ್ಪಳಿಕೆಯ ಏಟ
ಕ್ಷಣಕಣವೂ ತಿಂದು
ಹಾಗೆಯೇ ನಿಂತಿರುವೆನಲ್ಲಾ ನಾನು
ಹೇಡಿಯಂತೆ ಓಡದೆ
ಕಣ್ಣೀರ ಚೆಲ್ಲದೆ
ಹಲವು ಜನ ಬಂದು
ನನ್ನ ಮೇಲೆ ಕುಳಿತು ಕುಣಿದು
ಕೆಲವೊಮ್ಮೆ ಕೊರೆದು ಹೋದರೂ
ತಟಸ್ಥನಾಗಿಹೆನಲ್ಲಾ ಎಂದಿಗೂ ಅಲುಗದೆ
ಎಂದು ಬದುಕಿನ ಪಾಠವನ್ನು ಹೇಳಿಕೊಡುವ ಕವಿತೆಯು ಮುದುಕನ ಪ್ರಜ್ಞೆಯ ಹಿನ್ನೆಲೆಯಲ್ಲಿ ಮೂಡಿ ಬಂದಿದ್ದರೆ ಬಂಡೆಯು ಸಶಕ್ತ ಪ್ರತೀಕವಾಗಿ ಬೆಳೆದು ಉತ್ತಮ ಕವಿತೆಯಾಗುವ ಸಾಧ್ಯತೆ ಇತ್ತು. ಆಧುನಿಕ ಸಮಾಜದ ಲಕ್ಷಣವೆಂಬಂತೆ ಹಿಂಸೆಯು ಹಬ್ಬುತ್ತಿರುವ ಸಂದರ್ಭದಲ್ಲಿ ‘ರಾಕ್ಷಸರು’ ಎಂಬ ಕವಿತೆಯು
ಈಗಿರುವ ಅಸುರರಿಗೆ
ಕೊಂಬಿಲ್ಲದಿದ್ದರೂ
ಕೊಬ್ಬಿನಲೆ ತಿವಿಯುವರು
ಉದ್ದುದ್ದ ಉಗುರಿಲ್ಲ
ಬೆರಳಿನಲೆ ಸಿಗಿಯುವರು
ಕೋರೆ ಹಲ್ಲುಗಳಿಲ್ಲ
ಕ್ರೂರ ಕಣ್ಣುಗಳಿಲ್ಲ
ಗಹಗಹಿಸಿ ನಗದಿದ್ದರೂ
ಕಣ್ಣಿನಲೆ ಕೊಲ್ಲುವರು
ಎಂಬ ಸಾಲುಗಳು ಪುರಾಣ ಕಾಲದ ರಾಕ್ಷಸರ ಕ್ರೌರ್ಯವು ಈ ಕಾಲದಲ್ಲೂ ಹೊಸ ರೂಪದಲ್ಲಿ ಮುಂದುವರಿಯುತ್ತಿರುವ ದುರಂತವನ್ನು ಕಟ್ಟಿಕೊಡುತ್ತದೆ. ಮನುಷ್ಯನು ಏನೇ ಮಾಡಿದರೂ, ಹೊಸತನ್ನು ಎಷ್ಟೇ ಬಲಿಷ್ಠವಾಗಿ ಕಟ್ಟಿದರೂ ಅದು ಆ ಸೃಷ್ಟಿಯನ್ನು ಒಂದೇ ಏಟಿಗೆ ನಾಶ ಮಾಡಬಲ್ಲದು. ನಿಸರ್ಗದ ಎದುರು ಮಾನವ ನಿರ್ಮಿತ ಚರಿತ್ರೆಯು ಉರುಳಿ ಹೋಗುತ್ತದೆ. ಆದ್ದರಿಂದ ಪ್ರಕೃತಿಯ ಶಕ್ತಿಗೆ ನಾವು ವಿಧೇಯರಾಗಿರಬೇಕು ಎಂಬ ಸಂದೇಶವನ್ನು ಸಾರುವ ‘ಶಾಂತಳಾಗಿದ್ದರೆ ಸಾಕಿತ್ತು ಪ್ರಕೃತಿ’ ಎಂಬ ಕವಿತೆಯು ಮುಖ್ಯವಾಗುತ್ತದೆ. ‘ಬೆಳೆಯ ಸಿರಿ’, ‘ಯಾವುದು ಸಾಟಿ?’, ‘ವಶವರ್ತಿ’, ಗೆಳತಿಯೊಂದಿಗೆ’ ಎಂಬ ರಚನೆಗಳು ಕವಿಯತ್ರಿಯ ಲವಲವಿಕೆಯ ವ್ಯಕ್ತಿತ್ವದ ಮುದ್ರೆಯನ್ನು ಪಡೆದುಕೊಂಡಿದ್ದರೂ ಆಕೆಯ ಪಾಲಿಗೆ
ಸುಲಭವಲ್ಲದ ಕಲೆ ಅದು
ಒಳಗೊಂದಿಷ್ಟು ಇಟ್ಟು
ಕಣ್ಣಗಲಿಸಿ ನಗುವುದು
ಅಶ್ರುಧಾರೆಯಲ್ಲಿ ತೊಯ್ದ ಕೆನ್ನೆಗೆ ನೀರು ಚಿಮುಕಿಸಿ
ಮುಖ ತೊಳೆದು ಬಂದೆ ಎನ್ನುವುದು
ಸುಲಭ ಅಲ್ಲವೇ ಅಲ್ಲ
ಉದರದಲ್ಲಿದ್ದ ಯಾತನೆಗಳ ಸಾವಕಾಶದಲ್ಲೊಮ್ಮೆ ಹೊರ ಕಕ್ಕಿ
ಮನ ಬಿಚ್ಚಿ ಅತ್ತು ನಿರಾಳವಾಗುವುದು
ಹೌದು. ಆ ರೋದನವು ಹೊರಗೆ ಕೇಳಿಸುವುದಿಲ್ಲ. ಅದನ್ನು ಮೀರುವ ಯತ್ನಗಳೇ ಇಲ್ಲಿನ ಕವಿತೆಗಳ ಹುಟ್ಟಿಗೆ ಕಾರಣ.
ಈ ಸಂಕಲನದಲ್ಲಿರುವ ಎಂಭತ್ತನಾಲ್ಕು ಹನಿಗವನಗಳ ಪೈಕಿ ಹೆಚ್ಚಿನವುಗಳು ಡುಂಡಿರಾಜರ ಶೈಲಿಯನ್ನು ನೆನಪಿಸುವಂತಿದ್ದರೂ ‘ಮರೆವ ಕೊಡೆನಗೆ/ ಮರೆತು ಬಿಡುವೆ ಹಾಗೇ/ ಮರೆಯಲೆತ್ನಿಸಿದರೂ/ ಮರುಕಳಿಸುವ/ ಮನ ನೋಯಿಸುವ ಮಾತುಗಳ (ಮರೆವು) ನಿನಗಾಗ/ ಪ್ರೇಮಕವನವ/ ಬರೆದಿರುವೆ/ ನಿನ್ನೊಂದಿಗೆ/ ಪ್ರೇಮಕದನವ/ ಬಯಸಿರುವೆ (ಕದನ) ಅತಿಯಾದ ಆನಂದ/ ಒಮ್ಮೆಲೇ ಕೊಡದಿರು/ ಇಂತಿಷ್ಟೇ ದಯಪಾಲಿಸು ನನಗೆ/ ಸಪ್ಪೆ ಊಟಕ್ಕಿರುವ/ ಉಪ್ಪಿನ ಕಾಯಿಯಂತೆ (ರುಚಿ) ಏನಿದ್ದರೇನು/ ಧನ ಧಾನ್ಯ ಒಡವಿ/ ಪತಿ ಒಲವ ಹರಿಸದಿದ್ದರೆ/ ಅವಳೆಂದಿಗೂ ಬಡವಿ (ಒಲವು) ಮುಂತಾದ ಹನಿಗವನಗಳು ಅವರ ಸ್ವತಂತ್ರ ಆಲೋಚನೆಗಳಿಗೆ ಸಾಕ್ಷಿಯಾಗುತ್ತವೆ.
ವಿವಿಧ ವಯೋಮಾನದಲ್ಲಿ ಬರೆದ ಕವಿತೆಗಳು ಸೇರಿರುವುದರಿಂದ ಗುಣಮಟ್ಟದಲ್ಲಿ ಭಿನ್ನತೆಯಿದ್ದರೂ ಎಲ್ಲಾ ಕವಿತೆಗಳನ್ನು ಒಟ್ಟಿಗೆ ನೋಡಿದಾಗ ಕವಿಯತ್ರಿಯ ಪ್ರೀತಿಯ ಹಂಬಲವು ಅರಿವಿಗೆ ಬರುತ್ತದೆ. ಪ್ರೀತಿಯ ಗಳಿಗೆಗಳು ಎಷ್ಟೇ ಕ್ಷಣಿಕವೆನಿಸಿದರೂ, ಭ್ರಾಮಕವೆನಿಸಿದರೂ ಅವರ ಕವಿತೆಗಳು ಜೀವಂತಿಕೆಯನ್ನು ಅನುಭವಿಸುವುದು ಆ ಕ್ಷಣಗಳಲ್ಲಿಯೇ. ಇದೇ ಅವರ ಕವಿತೆಗಳಿಗೆ ಸ್ಫೂರ್ತಿಯಾಗಿದೆ. ಅವರ ಕವಿತೆಗಳಲ್ಲಿ ಕಳೆದುಹೋದ ನೆನಪುಗಳಿಗೆ ವಿಶೇಷ ಸ್ಥಾನವಿದ್ದರೂ ಹಳಹಳಿಕೆಯ ಬದಲು ಜೀವನಪ್ರೀತಿಗೆ ಆದ್ಯತೆಯಿದೆ. ಹಿತಮಿತವಾದ ಬರವಣಿಗೆ- ಆಡಂಬರವಿಲ್ಲದ ಸಾಲುಗಳು ಗಮನವನ್ನು ಸೆಳೆಯುತ್ತವೆ. ರಮ್ಯ ಶೈಲಿಯಲ್ಲಿ ಮೂಡಿದ ಕವಿತೆಗಳು ಗಾಢವಾಗಿ ತಟ್ಟದಿದ್ದರೂ ಹಲವು ಭಾವಗಳ ಮೂಲಕ ಮನಮುಟ್ಟುತ್ತವೆ. ಸಮಾಜದಲ್ಲಿ ಕಂಡು ಬರುವ ವಿಷವನ್ನು ನುಂಗಿಕೊಂಡರೂ ಕವಿಯತ್ರಿಯ ಮನಸ್ಸು ಕಲುಷಿತಗೊಂಡಿಲ್ಲ. ಆದ್ದರಿಂದ ಕವಿತೆಗಳು ನಕಾರಾತ್ಮಕ ಧೋರಣೆಗಳನ್ನು ಬದಿಗಿಟ್ಟು ಒಳಿತಿನ ಅಂಶಗಳೆಡೆಗೆ ತುಡಿಯುತ್ತವೆ.
ಸೌಮ್ಯ ಪ್ರವೀಣ್ ಅವರು ‘ಹೀಗೊಂದು ಭಾವ’ ಕವನ ಸಂಕಲನದಲ್ಲಿ ತಾವು ಕಂಡುಂಡ ಅನುಭವಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ಹಲವು ಮುಖಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಿದ್ದಾರೆ. ತಮ್ಮ ಮೊದಲ ಸಂಕಲನದ ಮೂಲಕ ಭರವಸೆಯನ್ನು ಹುಟ್ಟಿಸಿರುವ ಇವರು ಸತತ ಅಭ್ಯಾಸ, ಕನ್ನಡ ಕಾವ್ಯಪರಂಪರೆಯ ಅಧ್ಯಯನದ ಮೂಲಕ ಹೊಸ ಹಾದಿಯನ್ನು ಕಂಡುಕೊಂಡರೆ ಇವರಿಂದ ಇನ್ನಷ್ಟು ಉತ್ತಮ ಕವಿತೆಗಳು ಸೃಷ್ಟಿಯಾಗಬಹುದು. ಆ ಪ್ರತಿಭೆಯು ಸೌಮ್ಯ ಅವರಲ್ಲಿದೆ ಎಂಬುದರ ಕುರುಹುಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿ ಸೌಮ್ಯ ಪ್ರವೀಣ್
ಪ್ರಸ್ತುತ ಗೃಹಿಣಿಯಾಗಿ ಮಂಗಳೂರಿನಲ್ಲಿ ನೆಲೆಸಿರುವ ಸೌಮ್ಯ ಪ್ರವೀಣ್ ಇವರು ಕವನ, ಚುಟುಕು ಹಾಗೂ ಭಾವಗೀತೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದು, ಇವರ ಭಾವಗೀತೆಗಳಿಗೆ ಹೆಸರಾಂತ ಗಾಯಕರು ದನಿಯಾಗಿದ್ದಾರೆ. ಭಕ್ತಿಗೀತೆಗಳ ಒಂದು ಅಡಕ ಮುದ್ರಿಕೆ (ಸಿ.ಡಿ) ಬಿಡುಗಡೆಯಾಗಿದೆ. ‘ಹೀಗೊಂದು ಭಾವ’ ಅವರ ಚೊಚ್ಚಲ ಕವನ ಸಂಕಲನವಾಗಿದೆ. ಮಂಗಳೂರು ಆಕಾಶವಾಣಿಯ ಭಾವಗಾನ ಹಾಗೂ ಕಾವ್ಯಧಾರೆ ಕಾರ್ಯಕ್ರಮದಲ್ಲಿ ಅವರ ಕವಿತಾ ವಾಚನ ಪ್ರಸಾರವಾಗಿದೆ. ದಿನ ಪತ್ರಿಕೆ, ವಾರ ಪತ್ರಿಕೆ, ಮಾಸಪತ್ರಿಕೆಗಳು ಹಾಗೂ ಡಿಜಿಟಲ್ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ.
ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಕವಿ ಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ನಡೆಸಿದ ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಡಾ. ಕೆ.ವಿ. ತಿರುಮಲೇಶ್ ಸ್ಮರಣಾರ್ಥ ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ರಾಜ್ಯ ಮಟ್ಟದ ಯುಗಾದಿ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಗಡಿ ನಾಡಿನ ಶಾಖೆಯ ಆಶ್ರಯದಲ್ಲಿ ನಡೆಸಲಾದ ರಾಜ್ಯ ಮಟ್ಟದ ‘ಜೋಗುಳ ಹಾಡು ರಚನಾ ಸ್ಪರ್ಧೆ’ಯಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ.