ಬೆಂಗಳೂರು : ವಿವಿಧ ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಾಹಿತ್ಯ, ಸಂಸ್ಕೃತಿ ಒಲವಿನ ಹಿರಿಯ ಪತ್ರಕರ್ತ ಕಾರ್ಯಾಡಿ ಮಂಜುನಾಥ ಭಟ್ ಇವರು ಅಸೌಖ್ಯದಿಂದ ದಿನಾಂಕ 17 ಆಗಸ್ಟ್ 2025ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಇವರಿಗೆ 72 ವರ್ಷ ವಯಸ್ಸಾಗಿತ್ತು.
ಕುಂದಾಪುರ ತಾಲೂಕಿನ ನ ಗುಡ್ಡಟ್ಟು ಸಮೀಪದ ಹೆಸ್ಕತ್ತೂರು ಗ್ರಾಮದ ಹಾರಾಡಿಯ ಎಚ್. ಲಕ್ಷ್ಮೀನಾರಾಯಣ ಭಟ್ ಮತ್ತು ಗಂಗಮ್ಮ ದಂಪತಿಯ ಪುತ್ರನಾದ ಭಟ್ ಇವರು ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ.ಪೂ. ಶಿಕ್ಷಣ, ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ, ಕುಂಜಿಬೆಟ್ಟು ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ. ಎಡ್. ಪದವಿ ಪಡೆದು ಬೆಂಗಳೂರಿನ ನ್ಯಾಶನಲ್ ಪ್ರೌಢಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ದಿನಗಳಿಂದಲೂ ವಾಸವಿರುತ್ತಿದ್ದ ಪೇಜಾವರ ಮಠವನ್ನು ಕೇಂದ್ರೀಕರಿಸಿಕೊಂಡು ಸಾಹಿತ್ಯ, ಸಂಸ್ಕೃತಿಯ ಕುರಿತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಭಟ್, ಶಿಕ್ಷಕ ವೃತ್ತಿಯನ್ನು ಬಿಟ್ಟು ಪತ್ರಿಕಾರಂಗಕ್ಕೆ ಮಂಗಳೂರಿನ ‘ ನವಭಾರತ’ದ ಮೂಲಕ 1977ರಲ್ಲಿ ಕಾಲಿಟ್ಟರು. ಬಳಿಕ ‘ಮುಂಗಾರು’ ಪತ್ರಿಕೆಯ ಆರಂಭದಿಂದ ಕೊನೆಯವರೆಗೂ ಇದ್ದು (1985-96). ಬಳಿಕ ‘ಉದಯ ವಾಣಿ’ಯ ಮಂಗಳೂರು ವರದಿಗಾರರಾಗಿ 1998 ರಿಂದ ಕಾರ್ಯನಿರ್ವಹಿಸಿದರು. ಮಣಿಪಾಲ ಕೇಂದ್ರ ಕಚೇರಿಯ ಸಂಪಾದಕೀಯ ವಿಭಾಗದಲ್ಲಿದ್ದು, 2009ರಲ್ಲಿ ನಿವೃತ್ತಗಿದ್ದರು.
ಚಿಂತಕ, ವಿಮರ್ಶಕ :
ಮಂಗಳೂರು, ಮಣಿಪಾಲ ಕಚೇರಿಯಲ್ಲಿರುವಾಗ ವಿಶೇಷವಾಗಿ ಸಾಹಿತ್ಯ ಚಟುವಟಿಕೆಯ ವರದಿಗಾರಿಕೆ, ನ ಅಪರಾಧ ಸುದ್ದಿ ಪುಟವನ್ನು ನೋಡಿಕೊಳ್ಳುತ್ತಿದ್ದರು. ಭಟ್ ಅವರ ಕಾಲದಲ್ಲಿ ಕಂಪ್ಯೂಟರ್ ಪದ್ಧತಿ ಇಲ್ಲವಾಗಿದ್ದರೂ ‘ಉದಯವಾಣಿ’ಯಲ್ಲಿದ್ದ ಕೊನೆಯ ದಿನಗಳಲ್ಲಿ ಒಂದು ನಿರ್ದಿಷ್ಟ ಹಂತದವರೆಗೆ ಕಂಪ್ಯೂಟರ್ ಕಲಿತು, ‘ಇಷ್ಟು ಸುಲಭದಲ್ಲಿದ್ದರೆ ಮೊದಲೇ ಕಲಿತುಬಿಡುತ್ತಿದ್ದೆ’ ಎಂದು ಹಾಸ್ಯಚಟಾಕಿ ಹಾರಿಸುತ್ತಿದರು. 2009ರಲ್ಲಿ ಮಗನ ಜೊತೆ ವಾಸಿಸಲು ಬೆಂಗಳೂರಿಗೆ ಸ್ಥಳಾಂತರ ಗೊಂಡರು. ಈ ಸಂದರ್ಭ ‘ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ’ ಮಾಸಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಕಲಾಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಹಿರಿಯ ವಿಮರ್ಶಕ ಎ. ಈಶ್ವರಯ್ಯನವರ ಸ್ಮರಣೆಯಲ್ಲಿ ಮಂಜುನಾಥ ಭಟ್ ಅವರಿಗೆ ‘ಸರಸಸಾರಗ್ರಹಣನಿರೂಪಣನಿಪುಣ’ ಎಂಬ ಉಪಾಧಿಯ ಗೌರವವನ್ನೂ ಪ್ರದಾನ ಮಾಡಲಾಗಿತ್ತು.
ಮಂಜುನಾಥ ಭಟ್ ಅವರು ವರದಿಗಾರಿಕೆಯಷ್ಟೇ ಕೃತಿ ರಚನೆಯಲ್ಲಿಯೂ ತೊಡಗಿಕೊಂಡಿದ್ದರು. ಭಟ್ ಅವರು ಸಾವಿರಾರು ಪುಸ್ತಕಗಳನ್ನು ಖರೀದಿಸಿ ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಎಂ. ಜಿ. ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ವಿ. ಆಚಾರ್ಯರ ಕುರಿತಾದ ಸಂಪಾದಿತ ಕೃತಿ ‘ಸೇವಾಸಿಂಧು’, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಉದ್ಯಾವರ ಮಾಧವಾಚಾರ್ಯರ ‘ಲಗು-ಬಿಗು ಪ್ರಬಂಧಗಳು – ಶ್ರೀಪದ’, ಸೀತಾರಾಮ ಗೋಯಲ್ ಅವರ ‘ಮುಸ್ಲಿಂ ಪ್ರತ್ಯೇಕತಾವಾದ’, ‘ಭಾರತದ ಸೆಕ್ಯುಲರಿಸಂ’ ಮೊದಲಾದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿತ ಕೃತಿಗಳು, ತುರ್ತು ಪರಿಸ್ಥಿತಿ ಕುರಿತಾದ ಕೃತಿ ಹೀಗೆ ಅನೇಕ ಕೃತಿಗಳನ್ನು ಅವರು ಹೊರತಂದಿದ್ದರು.
Subscribe to Updates
Get the latest creative news from FooBar about art, design and business.
Previous Articleಎಡನೀರು ಶ್ರೀಮಠದಲ್ಲಿ ಯಕ್ಷಗಾನ ತಾಳಮದ್ದಲೆ
Next Article ‘ಟೊಟೊ ಪುರಸ್ಕಾರ’ಕ್ಕೆ ಕೃತಿಗಳ ಆಹ್ವಾನ