ಮೂಡಬಿದ್ರಿ : ಆಳ್ವಾಸ್ ಆಯುರ್ವೇದಿಕ್ ಕಾಲೇಜಿನ 1999ರ ಸಾಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 25 ವರ್ಷಗಳ ನಂತರ ತಮ್ಮ ಮಾತೃ ಸಂಸ್ಥೆಯಲ್ಲಿ ಒಂದಾಗಿ ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ದಿನಾಂಕ 09 ಮೇ 2025ರಂದು ‘ಯಾದೇ’ ಎಂಬ ಫಲಕದ ಅಡಿಯಲ್ಲಿ ಸಂಭ್ರಮಾಚರಣೆ ಮಾಡಿದರು.
ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವರ ಶುಭಾಶಯ, ಡಾ. ವಿನಯ ಆಳ್ವರ ಪ್ರಸ್ತಾವನೆ ಸಹಿತವಾಗಿ ಇತರ ವೈದ್ಯ ಶಿಕ್ಷಕರ ಜೊತೆಗೂಡುವಿಕೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಅಂದಿನ ಪ್ರಾಚಾರ್ಯರಾಗಿದ್ದ, ಪ್ರಸ್ತುತ ಕಣಚೂರು ಆಯುರ್ವೇದ ಆಸ್ಪತ್ರೆಯ ನಿರ್ದೇಶಕ ಸಲಹಾ ವೈದ್ಯರಾದ ಡಾ. ಸುರೇಶ ನೆಗಳಗುಳಿಯವರು ದೀಪ ಬೆಳಗಿ ಉದ್ಘಾಟಿಸಿ, ಶಿಷ್ಯರನ್ನುದ್ದೇಶಿಸಿ ಆಳ್ವಾಸ್ ಸಂಸ್ಥೆಯ ಶ್ರೇಷ್ಠತೆ, ಗುರುತಿಸುವಿಕೆ ಹಾಗೂ ಯಶಕಾರಕತ್ವವನ್ನು ಇಲ್ಲಿ ಕಲಿತ ವೈದ್ಯರಾದ ನಿಮ್ಮಿಂದ ತಿಳಿಯಬಹುದು ಹಾಗೂ ಗುರುವನ್ನು ಮೀರಿಸುವ ಶಿಷ್ಯರು ಯಾವತ್ತೂ ಗುರುವಿಗೆ ಹೆಮ್ಮೆಯ ಸಂಗತಿ ಎನ್ನುತ್ತಾ ಸ್ವರಚಿತ ಮುಕ್ತಕ ಮಾಲೆಯನ್ನು ವಾಚಿಸಿದರು.
ಉಪಪ್ರಾಚಾರ್ಯ ಡಾ. ಲಕ್ಷ್ಮೀಶ ಉಪಾಧ್ಯಾಯರು “ಇಲ್ಲಿ ಕಲಿತ ವಿದ್ಯಾರ್ಥಿಗಳ ಶಿಸ್ತು ಬದ್ಧತೆಯನ್ನು ನಿಮ್ಮನ್ನು ನೋಡಿ ತಿಳಿಯಬಹುದು” ಎಂದರು. ಡಾ. ಚಂದ್ರಕಾಂತ ಜೋಶಿ, ಡಾ. ಹರೀಶ್ ನಾಯಕ್, ಡಾ. ಗುರುಪ್ರಸಾದ್, ಡಾ. ಮಮತಾ ಗುರುಪ್ರಸಾದ್, ಡಾ. ಸದಾನಂದ ನಾಯಕ್ ಸಹಿತ ಹಲವರು ಹಳೆ ವಿದ್ಯಾರ್ಥಿಗಳ ಸದ್ಗುಣವನ್ನು ಕೊಂಡಾಡಿದರು. ಪ್ರಸ್ತುತ ಪ್ರಾಚಾರ್ಯರಾದ ಡಾ. ಸಜಿತ್ ರವರು ಅತಿಥೇಯ ನೆಲೆಯಲ್ಲಿ ಸ್ವಾಗತಿಸಿ, ಬರುತ್ತಾ ಇರಿ ಹೊಸ ವಿದ್ಯಾರ್ಥಿಗಳನ್ನೂ ಕಳಿಸಿ ಎಂದರು.
ಡಾ. ರೇವತಿ ಭಟ್, ಡಾ. ಮಂಜುನಾಥ ಭಟ್, ಡಾ. ಸುಬ್ರಹ್ಮಣ್ಯ ಪದ್ಯಾಣ, ಡಾ. ರವಿಶಂಕರ, ಡಾ. ಮಹೇಶ, ಯುನಿಟಿ ಆಸ್ಪತ್ರೆಯ ಡಾ. ಹರ್ಷ, ಡಾ. ಸುಕೇಶ, ಡಾ. ಸುಶೀಲ ಶೆಟ್ಟಿ, ಡಾ. ಸುರೇಖಾ ಪೈ, ಡಾ. ನಯನಾ, ಮುಂತಾದವರು ಉಪಸ್ಥಿತರಿದ್ದರು. ಕೇರಳದ ಖ್ಯಾತ ವೈದ್ಯೆಯಾಗಿರುವ ಹಳೆ ವಿದ್ಯಾರ್ಥಿನಿ ಸೀಮಾ ರಂಜಿತ್ ನಿರೂಪಣೆ ಮಾಡಿದ ಕಾರ್ಯಕ್ರಮದ ಪ್ರಾರ್ಥನೆಯನ್ನು ಖ್ಯಾತ ಗಾಯಕಿ ಡಾ. ಕ್ಷಮಾ ಕಿರಣ ಮತ್ತು ಸಂಗಡಿಗರು ಹಾಡಿದರು. ಪ್ರಸ್ತುತ ಕಲಿತ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದ ಡಾ. ಸುಮಂತ ಶೆಣೈ ಧನ್ಯವಾದ ಸಮರ್ಪಣೆ ಮಾಡಿದರು.