ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೊಸದಾಗಿ ಸ್ಥಾಪಿತವಾಗಿರುವ “ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ” ಪುರಸ್ಕಾರಕ್ಕೆ ಯಜಮಾನ್ ಎಂಟರ್ ಪ್ರೈಸಸ್-ಶ್ರೀಹರಿ ಖೋಡೆಯವರನ್ನು ಆಯ್ಕೆ ಮಾಡಲಾಗಿದೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ಸಮ್ಮೇಳನಾಧ್ಯಕ್ಷರಾದ ಡಾ. ದೊಡ್ಡರಂಗೇಗೌಡರ ಹೆಸರಿನಲ್ಲಿ ಒಂದು ದತ್ತಿ ಮತ್ತು ಜಾತಿಮತಗಳ ಮೀರಿ ಭಾವೈಕ್ಯತೆಯನ್ನು ಸಾರಿದ ಸಂತ ಶಿಶುನಾಳ ಶರೀಫರ ಗುದ್ದುಗೆ ಹಾವೇರಿ ಜಿಲ್ಲೆಯಲ್ಲಿಯೇ ಇರುವುದರಿಂದ ಸಂತ ಶಶಿನಾಳ ಶರೀಫರು ಮತ್ತು ಅವರ ಗುರುಗಳಾದ ಗುರು ಗೋವಿಂದ ಭಟ್ಟರನ್ನು ಜೊತೆಯಾಗಿ ನೆನಪಿಸಿಕೊಳ್ಳುವ ವಾಡಿಕೆಯ ಜೊತೆಗೆ ಅದೊಂದು ಪರಂಪರೆ ಕೂಡ ಆಗಿರುವುದರಿಂದ “ಸಂತ ಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಕಳಸದ ಗೋವಿಂದ ಭಟ್ಟರ ದತ್ತಿ” ಪ್ರಶಸ್ತಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

‘ಯಜಮಾನ್’ ಎಂದೇ ಪ್ರಖ್ಯಾತರಾದ ಶ್ರೀಹರಿ ಖೋಡೆ ಮತ್ತು ‘ಯಜಮಾನ್ ಎಂಟರ್ ಪ್ರೈಸಸ್’ ಎರಡನ್ನು ಪ್ರತ್ಯೇಕವಾಗಿ ನೋಡುವುದೇ ಅಸಾಧ್ಯ. ದೇಶ-ವಿದೇಶಗಳಲ್ಲಿ ಮನ್ನಣೆ ಪಡೆದ ಉದ್ಯಮಿಯಾದ ಶ್ರೀಹರಿ ಖೋಡೆ ಹತ್ತಾರು ಕ್ಷೇತ್ರದಲ್ಲಿ ಆಸಕ್ತರು, ಅಧ್ಯಾತ್ಮ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿರುವ ಅವರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದು ನಾಡಿನ ಪ್ರಖ್ಯಾತ ಗಾಯಕರು ಅವುಗಳನ್ನು ಹಾಡಿದ್ದಾರೆ. ಕಾವೇರಿ ದಂಡೆಯಲ್ಲಿ ಅವರು ಜೀರ್ಣೋದ್ದಾರಗೊಳಿಸಿದ ವೇಣುಗೋಪಾಲ ಸ್ವಾಮಿ ದೇಗುಲ ಉತ್ತಮ ವಾಸ್ತುಶಿಲ್ಪ ಎನ್ನಿಸಿಕೊಂಡಿದೆ. ‘ಸಂತ ಶಿಶುನಾಳ ಶರೀಫ’ ಚಿತ್ರದ ಮೂಲ ಸಂತ ಶಿಶುನಾಳ ಶರೀಫರ ಜೀವನ ಮತ್ತು ಸಾಧನೆಯನ್ನು ಜನಮನಕ್ಕೆ ತಲುಪಿಸಿದ ಶ್ರೀಹರಿ ಖೋಡೆ, ‘ಈಶ್ವರ ಅಲ್ಲ, ನೀನೆ ಎಲ್ಲಾ’ ಎಂಬ ಧಾರವಾಹಿಯನ್ನೂ ಕೂಡ ಇದೇ ವಸ್ತುವಿನ ಕುರಿತು ದೂರದರ್ಶನಕ್ಕಾಗಿ ನಿರ್ಮಿಸಿದ್ದರು. ‘ಮೈಸೂರು ಮಲ್ಲಿಗೆ’, ‘ನಾಗಮಂಡಲ’, ‘ಅಲ್ಲಮ’ದಂತಹ ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದ ಶ್ರೀಹರಿ ಖೋಡೆ ನಮ್ಮನ್ನು 2016ರಲ್ಲಿ ಅಗಲಿದರು. ‘ಯಜಮಾನ್ ಎಂಟರ್ ಪ್ರೈಸಸ್’ ಇವರ ಪರಂಪರೆಯನ್ನು ಮುಂದುವರೆಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ಹೆಸರನ್ನೂ ಸೇರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ಬಿ.ಎಂ. ಪಟೇಲ್ ಪಾಂಡು, ಎಚ್.ಬಿ. ಮದನ್ ಗೌಡ, ಡಿ.ಆರ್. ವಿಜಯ್ ಕುಮಾರ್, ಲಿಂಗಯ್ಯ ಬಿ. ಹಿರೇಮಠ ಇವರು ಭಾಗವಹಿಸಿದ ಸರ್ವಾನುಮತದಿಂದ ಈ ಆಯ್ಕೆಯನ್ನು ಮಾಡಿರುತ್ತಾರೆ. ಸಂತ ಶರೀಫರ ಚಿಂತನೆಗಳನ್ನು ಪ್ರಸಾರ ಮಾಡುತ್ತಿರುವ ಸಂಸ್ಥೆ ಮತ್ತು ಅದರ ಸ್ಥಾಪಕರಿಗೆ ನೀಡುತ್ತಿರುವ ಈ ಪುರಸ್ಕಾರ ಅರ್ಹ ಆಯ್ಕೆಯಾಗಿದೆ ಎಂದು ತಿಳಿಸಿರುವ ನಾಡೋಜ ಡಾ. ಮಹೇಶ ಜೋಶಿ ‘ಯಜಮಾನ್ ಎಂಟರ್ ಪ್ರೈಸಸ್’ ಇನ್ನಷ್ಟು ಪರಿಣಾಮಕಾರಿಯಾಗಿ ಸಂತ ಶಿಶುನಾಳ ಶರೀಫರ ಮತ್ತು ಅವರ ಗುರುಗಳಾದ ಗೋವಿಂದ ಭಟ್ಟರ ಚಿಂತನೆಗಳನ್ನು ಹರಡಲಿ ಎಂದು ಆಶಿಸಿದ್ದಾರೆ.
