ಮಸ್ಕತ್: ಪ್ರಪ್ರಥಮ ಬಾರಿ ಒಮನ್ ಮಸ್ಕತ್ ನಲ್ಲಿ ತುಳು ನಾಡಿನ ಕಾರಣೀಕದ ದೈವ ಕೊರಗಜ್ಜನ ಚರಿತ್ರೆ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನ ಕಂಡಿತು. ಶ್ರೀ ಶನೀಶ್ವರ ಭಕ್ತ ವೃಂದ, ಪಕ್ಷಿಕೆರೆ ತಂಡದವರು ಹರೀಶ್ ಶೆಟ್ಟಿ ಸೂಡ ವಿರಚಿತ “ಸ್ವಾಮಿ ಕೊರಗಜ್ಜ” ಪ್ರಸಂಗವನ್ನು ಕಾಲಮಿತಿಯಲ್ಲಿ ಪ್ರಸ್ತುತಿ ಮಾಡಿದರು. ಬಿರುವ ಜವನೆರ್ ಮಸ್ಕತ್ ವಾಟ್ಸಾಪ್ ಬಳಗದ ಸೇವಾ ಸಂಘಟನೆಯು ಸಂಯೋಜಿಸಿದ ಈ ಕಾರ್ಯಕ್ರಮ ಸಾವಿರಾರು ತುಳುವ ಯಕ್ಷಗಾನ ಅಭಿಮಾನಿಗಳ ಹಾಗೂ ಕೊರಗಜ್ಜ ಭಕ್ತರ ಮನ ಗೆದ್ದಿತು.
ಭಾಗವತಿಕೆಯಲ್ಲಿ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಿರುವ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಚೆಂಡೆ ಮದ್ದಳೆ ಹಿಮ್ಮೇಳದಲ್ಲಿ ಪಕ್ಷಿಕೆರೆ ಪದ್ಮನಾಭ ಶೆಟ್ಟಿಗಾರ್ ಹಾಗೂ ಭಾಸ್ಕರ ಭಟ್ ಕಟೀಲು ಅವರು ಸಹಕರಿಸಿದರು.
ಶಿವಯೋಗಿಯಾಗಿ ಕದ್ರಿ ನವನೀತ ಶೆಟ್ಟಿ, ಕೊರಗಜ್ಜನಾಗಿ ಸದಾಶಿವ ಆಳ್ವ ತಲಪಾಡಿ, ಮೈರಕ್ಕೆ ಪಾತ್ರದಲ್ಲಿ ರಾಮಚಂದ್ರ ಮುಕ್ಕ, ಮೈಸ0ದಾಯನಾಗಿ ಕಾವಲಕಟ್ಟೆ ದಿನೇಶ್ ಶೆಟ್ಟಿ, ಪಂಜಂದಾಯ ದೈವವಾಗಿ ದಯಾನಂದ ಜಿ. ಕತ್ತಲ್ಸಾರ್ ಹಾಗೂ ಪುಷ್ಪರಾಜ್ ಕುಕ್ಕಾಜೆ ಇವರುಗಳು ಅರಸು ದೈವ ಪಾತ್ರದಲ್ಲಿ ಅರ್ಥಗಾರಿಕೆ ಮೆರೆಸಿದರು.
ತುಳು ಸಂದಿ, ಪಾರ್ದನ, ಗಾದೆ, ನುಡಿಕಟ್ಟುಗಳ ಬಳಕೆಯೊಂದಿಗೆ ಗ್ರಾಮ್ಯ ತುಳು ಭಾಷೆಯ ಸೊಗಡನ್ನು ಅನಾವರಣ ಗೊಳಿಸಲಾಯಿತು. ಕಾರ್ಯಕ್ರಮದ ಪೋಷಕ ಮಸ್ಕತ್ ಫಾರ್ಮಸಿಯ ಆಡಳಿತ ನಿರ್ದೇಶಕ ಬಕುಲ್ ಭಾಯ್ ಮೆಹತಾ ಅವರನ್ನು ಸಂಮಾನಿಸಲಾಯಿತು.
ಬಿರುವ ಜವನೆರ್ ಮಸ್ಕತ್ ನ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿ, ಶ್ವೇತಾ ಸುವರ್ಣ ನಿರೂಪಿಸಿದರು. ಮಸ್ಕತ್ ಧಾರ್ ಸೈಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ, ಚೆಂಡೆ ಬಳಗದೊಂದಿಗೆ ಕಲಾವಿದರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಶಂಕರ್ ಉಪ್ಪೂರು ದಂಪತಿಗಳು ದೀಪ ಪ್ರಜ್ವಲನ ಮಾಡಿದರು. ಮಕ್ಕಳು, ಮಹಿಳೆಯರು ಸೇರಿ ಹೆಚ್ಚಿನ ಪ್ರೇಕ್ಷಕರು ಚಾಪೆಯಲ್ಲಿ ಕುಳಿತು ಕೊರಗಜ್ಜನ ಕತೆಯನ್ನು ಉತ್ಸಾಹದಿಂದ ಆಸ್ವಾದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ “ತುಳುವರ ಕೂಟ”ದಲ್ಲಿ ಕದ್ರಿ ನವನೀತ ಶೆಟ್ಟಿ ಕಲಾವಿದರ ಪರಿಚಯ ಮಾಡಿದರು.
ವಿವಿಧ ಸಮುದಾಯಗಳ ಪ್ರಮುಖರಾದ ಶಶಿಧರ ಶೆಟ್ಟಿ ಮಲ್ಲಾರ್, ನ್ಯಾಷನಲ್ ಬ್ಯಾಂಕ್ ಆಫ್ ಓಮನ್ ನ ರಾಮ್ಕಿ ಜಿ.ವಿ, ಲಕ್ಷ್ಮೀ ನಾರಾಯಣ ಆಚಾರ್, ಮಂಜುನಾಥ್ ನಾಯಕ್, ಪದ್ಮಾಕರ ಮೆಂಡನ್, ಡಾ. ಸಿ.ಕೆ. ಅಂಚನ್, ರತ್ನಾಕರ ಆಚಾರ್ಯ ಮತ್ತು ರಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .
ದಯಾನಂದ ಜಿ. ಕತ್ತಲ್ಸಾರ್ ಅವರು “ಕೂಟದ ಬಿನ್ನೆ” ನೆಲೆಯಲ್ಲಿ ತುಳು ಯಕ್ಷಗಾನದ ಮೂಲಕ ಕೊರಗಜ್ಜನ ಕಥೆಯನ್ನು ತುಳುವರಿಗೆ ಪರಿಚಯಿಸಿದ ಸಂಘಟಕರನ್ನು ಅಭಿನಂದಿಸಿದರು.