ವಾರಾಣಸಿ : ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನದ ಗಂಧಗಾಳಿ ಇಲ್ಲದಿದ್ದರೂ ಕೇವಲ ನಾಲ್ಕು ವಾರಗಳ ತರಬೇತಿಯಿಂದಲೇ ಉತ್ತರ ಭಾರತದ ವಿದ್ಯಾರ್ಥಿಗಳು ‘ಜಟಾಯು ಮೋಕ್ಷ’ ಯಕ್ಷಗಾನ ಪ್ರಸಂಗವನ್ನು ದಿನಾಂಕ 17 ಅಕ್ಟೋಬರ್ 2025ರಂದು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಯಕ್ಷಗಾನ ಗುರು ಉಡುಪಿಯ ಬನ್ನಂಜೆ ಸಂಜೀವ ಸುವರ್ಣ ಇವರು ವಾರಾಣಸಿಗೆ ತೆರಳಿ ಅಲ್ಲಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ (ಎನ್.ಎಸ್.ಡಿ.) ರಂಗ ಶಿಕ್ಷಣ ಪಡೆಯುತ್ತಿರುವ 20 ವಿದ್ಯಾರ್ಥಿಗಳಿಗೆ ಯಕ್ಷ ಧೀಂಗಿಣ ಕಲಿಸಿ ಅವರಲ್ಲಿ ಕರಾವಳಿ ಕಲೆಯ ಒಲವು ಮೂಡಿಸಿದ್ದಾರೆ.
ದಿನಾಂಕ 15 ಸೆಪ್ಟೆಂಬರ್ 2025ರಿಂದ ಪ್ರಾರಂಭವಾಗಿ 17 ಅಕ್ಟೋಬರ್ 2025ರವರೆಗೆ ಯಕ್ಷಗಾನದ ರಾಗ, ತಾಳ ಮತ್ತು ಮುಖಭಾವಗಳನ್ನು ಅಭ್ಯಾಸ ಮಾಡಿದ 10 ಹುಡುಗರು ಹಾಗೂ 10 ಹುಡುಗಿಯರು ಪಾರ್ತಿಸುಬ್ಬ ಬರೆದ ಪೌರಾಣಿಕ ಪ್ರಸಂಗವನ್ನು ವಾರಾಣಸಿ ಎನ್.ಎಸ್.ಡಿ.ಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಾರ್ತಿಸುಬ್ಬ ಬರೆದ ‘ಪಂಚವಟಿ’ ಪ್ರಸಂಗವನ್ನು ಪರ್ಕಳದ ಪ್ರಭಾತ್ ಎಸ್. ಪಾಟೀಲ್ ಇವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಅದರಲ್ಲಿನ ‘ಜಟಾಯು ಮೋಕ್ಷ’ ಭಾಗವನ್ನು ವಿದ್ಯಾರ್ಥಿಗಳ ತರಬೇತಿಗೆ ಆಯ್ಕೆ ಮಾಡಲಾಗಿತ್ತು.



ಗುರು ಸಂಜೀವ ಸುವರ್ಣ ಇವರ ತಂಡದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಶ್ರೀಧರ ಹೆಗಡೆ ಮತ್ತು ಚೆಂಡೆಯಲ್ಲಿ ಶಿಶಿರ್ ಸಹಕರಿಸಿದ್ದರು. ಜಾರ್ಖಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ರಂಗ ವಿದ್ಯಾರ್ಥಿಗಳು ಸುವರ್ಣರ ಗರಡಿಯಲ್ಲಿ ನಾಟ್ಯ, ಮಾತುಗಾರಿಕೆ, ವೇಷಭೂಷಣ ಕುರಿತ ತರಬೇತಿಯನ್ನೂ ಪಡೆದಿದ್ದಾರೆ.



“35 ದಿವಸಗಳಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕಾಗಿರುವುದರಿಂದ ಪ್ರತಿದಿನ ಬೆಳಿಗ್ಗೆ 6ರಿಂದ 8 ಗಂಟೆವರೆಗೆ, ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 3ರಿಂದ ರಾತ್ರಿಯವರೆಗೆ ತರಬೇತಿ ನೀಡಿದ್ದೇವೆ. ಈ ವಿದ್ಯಾರ್ಥಿಗಳು ‘ಜಟಾಯು ಮೋಕ್ಷ’ ಪ್ರಸಂಗವನ್ನು ಸರಳವಾಗಿ ಪ್ರೇಕ್ಷಕರ ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ. ಸಪ್ತತಾಳ, ಸ್ವರಾಭ್ಯಾಸ, ಪೂರ್ವರಂಗ, ಗೋಪಾಲ, ಸ್ತ್ರೀ ವೇಷಗಳನ್ನೂ ಅವರಿಗೆ ಕಲಿಸಿಕೊಟ್ಟಿದ್ದೇವೆ. ಈಗಾಗಲೇ ಉತ್ತರ ಭಾರತದ ರಂಗಭೂಮಿಯಲ್ಲಿ ಕರಾವಳಿಯ ಯಕ್ಷಗಾನದ ಸಾಕಷ್ಟು ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ” ಎಂದು ಅವರು ವಿವರಿಸಿದರು.



“ಮೊದಲ ವಾರದಲ್ಲಿ ತಾಳ, ಲಯ ಹಾಗೂ ದೇಹಭಾಷೆಯ ಶಿಸ್ತುಗಳ ಅಭ್ಯಾಸ ನಡೆಯಿತು. ಎರಡನೇ ವಾರದಲ್ಲಿ ಪಾತ್ರ ನಿರ್ವಹಣೆ, ಮುಖಭಾವ ಮತ್ತು ಭಾವಗಳ ಅಭಿವ್ಯಕ್ತಿಗೆ ಒತ್ತು ನೀಡಲಾಯಿತು. ಸಂಗೀತಮಯವಾದರೂ ತೀವ್ರತೆಯುಳ್ಳ ಯಕ್ಷಗಾನದ ಸಂಭಾಷಣೆ ತರಬೇತಿ ಕಠಿಣವಾಗಿತ್ತು. ಮೂರನೇ ವಾರದಲ್ಲಿ ಸಂಗೀತ, ತಾಳ ಮತ್ತು ಕಥನವನ್ನು ಒಂದಾಗಿಸಿ ದೃಶ್ಯಗಳಿಗೆ ಜೀವ ತುಂಬಲಾಯಿತು. ನಾಲ್ಕನೇ ವಾರದಲ್ಲಿ ನೃತ್ಯ, ಅಭಿನಯ, ಚಲನೆಗಳು ಮತ್ತು ಸಂಭಾಷಣೆಯನ್ನು ಸೇರಿಸಿ ಪೂರ್ಣಮಟ್ಟದ ಅಭ್ಯಾಸ ನಡೆಯಿತು.



ಎನ್.ಎಸ್.ಡಿ.ಯ ವಿದ್ಯಾರ್ಥಿಗಳು ಯಕ್ಷಗಾನದ ನಾಟ್ಯವನ್ನಷ್ಟೇ ಕಲಿತಿಲ್ಲ. ಯಕ್ಷಗಾನದ ಗುರು ಪರಂಪರೆಯ ಸತ್ವಗಳನ್ನೂ ಅಭ್ಯಸಿಸಿದ್ದಾರೆ. ಭರತಮುನಿಯ ನಾಟ್ಯಶಾಸ್ತ್ರಕ್ಕೂ ಯಕ್ಷಗಾನಕ್ಕೂ ಇರುವ ಸಂಬಂಧದ ಬಗ್ಗೆಯೂ ಅವರು ಅಧ್ಯಯನ ನಡೆಸುತ್ತಿದ್ದಾರೆ. ಯಕ್ಷಗಾನದ ಬಣ್ಣಗಾರಿಕೆಯ ಬಗ್ಗೆಯೂ ತಿಳಿದುಕೊಳ್ಳುವುದರಿಂದ ಅವರಿಗೆ ಪೌರಾಣಿಕ ನಾಟಕಗಳನ್ನು ಮಾಡಲು ಸಹಕಾರಿಯಾಗುತ್ತದೆ. ಕೂಡಿಯಾಟ್ಟಂ ಕಥಕ್ಕಳಿ ಮೊದಲಾದ ಕಲಾ ಪ್ರಕಾರಗಳನ್ನೂ ಅವರು ಅಭ್ಯಾಸ ಮಾಡುತ್ತಾರೆ. ‘ಭರತನ ನಾಟ್ಯಶಾಸ್ತ್ರದ ಅಂಶಗಳು ಶೇ 100ರಷ್ಟು ಇರುವ ಕಲೆಯೆಂದರೆ ಅದು ಯಕ್ಷಗಾನ ಮಾತ್ರ. ಭರತ ಹೇಳಿರುವ ಪೂರ್ವರಂಗ ಸೇರಿದಂತೆ ಹಲವಾರು ಅಂಶಗಳು ಯಕ್ಷಗಾನದಲ್ಲಿವೆ” ಎಂದು ಅವರು ತರಬೇತಿಯ ಅನುಭವ ಹಂಚಿಕೊಂಡರು.

