ಸುರತ್ಕಲ್ : ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟಿನ ಕೇಂದ್ರೀಯ ಮಹಿಳಾ ಘಟಕದ ‘ಪ್ರಮದಾ ಪ್ರಭಾ’ 6ನೇ ವಾರ್ಷಿಕ ಸಂಭ್ರಮವು ದಿನಾಂಕ 01-05-2023ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಟ್ಲ ಫೌಂಡೇಷನ್ ಟ್ರಸ್ಟಿನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಮಾತನಾಡುತ್ತಾ “ಯಕ್ಷಗಾನದಲ್ಲಿ ಮಹಿಳೆಯರು ಮತ್ತು ಮಕ್ಕಳು ತೊಡಗಿಸಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಿಳಾ ಘಟಕ ಕೆಲಸ ಮಾಡುವಂತಾಗಲಿ. ಇದಕ್ಕೆ ಪ್ರತೀ ವರ್ಷ ಪಟ್ಲ ಫೌಂಡೇಷನ್ ಟ್ರಸ್ಟಿಗೆ ಐದು ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡುವುದಾಗಿ” ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ, ಖ್ಯಾತ ಉದ್ಯಮಿಗಳು ಹಾಗೂ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಗೌರವಾಧ್ಯಕ್ಷರೂ ಆದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಮಾತನಾಡಿ “ಪಟ್ಲ ಫೌಂಡೇಷನ್ ಟ್ರಸ್ಟಿಗೆ ಮಹಿಳಾ ಘಟಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಮಹಿಳಾ ಘಟಕ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ” ಎಂದರು. ಇನ್ನೋರ್ವ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಟ್ರಸ್ಟಿನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಮಾತನಾಡಿ “ಮಹಿಳಾ ಘಟಕವು ಪಟ್ಲ ಫೌಂಡೇಷನ್ ಟ್ರಸ್ಟಿನ ಆಸ್ತಿ. ಮಹಿಳೆಯರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ” ಎಂದರು.
ಶ್ರೀ ಕ್ಷೇತ್ರ ಇಡ್ಯಾದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಐ. ರಮಾನಂದ ಭಟ್ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಮತಿ ಶಕುಂತಲಾ ಆರ್.ಭಟ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾಟಿಪಳ್ಳ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗುಣವತಿ ರಮೇಶ್ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ, ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಪೂಂಜ, ಉದ್ಯಮಿ ಅಗರಿ ರಾಘವೇಂದ್ರ ರಾವ್, ನ್ಯಾಯವಾದಿ ಕಿಶೋರ್ ಕುಮಾರ್, Ln. ಶಾಲಿನಿ ಸುವರ್ಣ, ಟ್ರಸ್ಟಿನ ಉಪಾಧ್ಯಕ್ಷ ಡಾ. ಮನು ರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ, ಹಿರಿಯ ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ, ಬೆಳ್ತಂಗಡಿ ಘಟಕದ ಭುಜಬಲಿ ಧರ್ಮಸ್ಥಳ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಹವ್ಯಾಸಿ ಘಟಕದ ಸಂಜಯ್ ರಾವ್, ಮಹಿಳಾ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪುಟಣಿಗಳ ‘ಯಕ್ಷ ನೃತ್ಯ ವಂದನಾ’ ಕಲಾಸಕ್ತರ ಮನಸೂರೆಗೊಂಡಿತು. ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಸ್ವಾಗತಿಸಿ, ಗೌರವಧ್ಯಕ್ಷೆ ಆರತಿ ಆಳ್ವ ವಂದಿಸಿದರು. ಕಾರ್ಯದರ್ಶಿ ಸುಮಂಗಳಾ ರತ್ನಾಕರ್ ರಾವ್ ಮತ್ತು ಸಾಯಿಸುಮ ನಿರೂಪಿಸಿದರು.
ಇದೇ ವೇದಿಕೆಯಲ್ಲಿ ‘ಯಕ್ಷ ಧ್ರುವ ಪುರಸ್ಕಾರ 2023’ ನೀಡಿ ಗೌರವಿಸುವ ಕಾರ್ಯಕ್ರಮವೂ ನಡೆಯಿತು. ‘ಯಕ್ಷ ಮಂಜುಳಾ’ ಕದ್ರಿ ಮಂಗಳೂರು ಇದರ ಸ್ಥಾಪಕಿ ಮತ್ತು ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ, ಬಹುಮುಖ ಪ್ರತಿಭೆಯ ಮಹಿಳಾ ಯಕ್ಷಗಾನ ಕಲಾವಿದೆ ಶ್ರೀಮತಿ ಸುಷ್ಮಾ ಮೈರ್ಪಾಡಿ ವಶಿಷ್ಠ ಬೆಂಗಳೂರು ಹಾಗೂ ಇನ್ನೋರ್ವ ಬಹುಮುಖ ಪ್ರತಿಭೆಯ ಯಕ್ಷಗಾನ ಕಲಾವಿದೆ ಶಿವಾನಿ ಸುರತ್ಕಲ್ ಇವರು ಮೂರೂ ಮಂದಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಯಕ್ಷ ಧ್ರುವ ಪುರಸ್ಕಾರ -2023’ವನ್ನು ನೀಡಿ ಗೌರವಿಸಲಾಯಿತು.
ಅಪರಾಹ್ನ ವಿವಿಧ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಕವಿ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಪ್ರಸಂಗ ‘ರತಿ ಕಲ್ಯಾಣ’, ‘ಯಕ್ಷ ಸಾಧಕಿಯರು’ ವಾಟ್ಸಪ್ ಬಳಗದ ಮಹಿಳೆಯರಿಂದ ತೆಂಕು ಮತ್ತು ಬಡಗಿನ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯಿತು. ಕವಿ ಮೂಲಿಕೆ ರಾಮಕೃಷ್ಣಯ್ಯ ವಿರಚಿತ ಪ್ರಸಂಗ ‘ಭಕ್ತ ಸುಧನ್ವ’, ಕವಿ ಕಡಂದಲೆ ರಾಮರಾವ್ ವಿರಚಿತ ಪ್ರಸಂಗ ‘ದ್ರೌಪದಿ ಪ್ರತಾಪ’ ಮತ್ತು ಕವಿ ಶಿರವಟಿ ವಾಸುದೇವ ಮಯ್ಯ ವಿರಚಿತ ‘ಅಗ್ರಪೂಜೆ’ ಪ್ರಸಂಗದ ಪ್ರದರ್ಶನ ಅದ್ಭುತವಾಗಿತ್ತು. ಸ್ಥಳೀಯ ಹಾಗೂ ಕರ್ನಾಟಕದ ಬಹುಭಾಗದ ಕಲಾವಿದೆಯರು ಪುರುಷರಿಗೆ ಸರಿಸಮಾನವಾಗಿ ವೃತ್ತಿಪರ ಕಲಾವಿದರಂತೆ ಅಮೋಘವಾಗಿ ನೀಡಿದ ಈ ಯಶಸ್ವೀ ಕಾರ್ಯಕ್ರಮಕ್ಕೆ ಕಲಾಸಕ್ತರು ಸಾಕ್ಷಿಯಾದರು.