ಮಂಗಳೂರು: ಯಕ್ಷಭವನ ಟ್ರಸ್ಟ್ ಆಕಾಶಭವನ ಮಂಜಲ್‌ಕಟ್ಟೆ ಕಾವೂರು ವತಿಯಿಂದ ಆಯೋಜಿಸಿದ ‘ಯಕ್ಷ ಮುಂಗಾರು’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 03 ಆಗಸ್ಟ್ 2025ರ ಭಾನುವಾರದಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್ ಕಾವೂರು ಮಾತನಾಡಿ “ಯುವ ಪೀಳಿಗೆಗೆ ಯಕ್ಷಗಾನ ತರಬೇತಿ ನೀಡಿ ಕಲೆಯನ್ನು ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಯಕ್ಷಭವನ ಟ್ರಸ್ಟ್ ಕಾರ್ಯೋನ್ಮುಖವಾಗಿ ಎಳೆಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ಮಾತನಾಡಿ “ಶಾಲಾ ಹಂತದಲ್ಲೇ ಮಕ್ಕಳನ್ನು ಯಕ್ಷಗಾನದತ್ತ ಆಕರ್ಷಿಸಲು ಪೋಷಕರು ಬೆಂಬಲ ನೀಡಬೇಕು” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ ‘ಯಕ್ಷ ಭವನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಶಂಕರ ಶೆಟ್ಟಿ ನಂದನಕೆರೆ, ಕಾವೂರು ಬಂಟರ ಸಂಘದ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ, ನಿಕಟಪೂರ್ವ ಕಾರ್ಪೊರೇಟರ್ ಗಾಯತ್ರಿ ರಾವ್, ಮಾಜಿ ಕಾರ್ಪೊರೇಟರ್ ದೀಪಕ್ ಪೂಜಾರಿ, ಉದ್ಯಮಿ ಕಿಶೋರ್ ಸುವರ್ಣ, 18ನೇ ವಾರ್ಡ್ ಬಿಜೆಪಿ ಅಧ್ಯಕ್ಷ ಕೊರಗಪ್ಪ ಶೆಟ್ಟಿ ಆಕಾಶಭವನ, ಯಕ್ಷಭವನ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ರಾಮ ಶೆಟ್ಟಿ, ಯಕ್ಷಗುರುಗಳಾದ ದಯಾನಂದ ಕೋಡಿಕಲ್, ವಿಜಿತ್ ಶೆಟ್ಟಿ ಆಕಾಶಭವನ, ಯಕ್ಷಭವನ ಟ್ರಸ್ಟ್ ಇದರ ಕೋಶಾಧಿಕಾರಿ ರಾಜೇಶ್ ಆಚಾರ್ಯ ಉಪಸ್ಥಿತರಿದ್ದರು. ಯಕ್ಷಭವನ ಟ್ರಸ್ಟ್ ಅಧ್ಯಕ್ಷೆ ಜಯಶ್ರೀ ಯೋಗೀಶ್ ಸನ್ಮಾನ ಪತ್ರ ವಾಚಿಸಿದರು.
ಯಕ್ಷಗಾನ ವೈಭವ :
ಯಕ್ಷಭವನ ಕಲಾ ಕೇಂದ್ರದ ಮಹಿಳೆಯರಿಂದ ಯಕ್ಷಗಾನ ತಾಳಮದ್ದಳೆ ಹಾಗೂ ಯಕ್ಷಭವನ ಕೇಂದ್ರದ ಮಕ್ಕಳಿಂದ ಸುದರ್ಶನ ವಿಜಯ-ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಶ್ರೀರಾಮ ಯಜ್ಞ ಯಕ್ಷ ಅಭಿಯಾನ ಅಯೋಧ್ಯಾ ಯಕ್ಷ ಯಾತ್ರಾ ಪ್ರಯುಕ್ತ ಶ್ರೀರಾಮ ಮೃಗಾಭಿಸರಣ ಪ್ರದರ್ಶನ ನಡೆಯಿತು.
ವಸುಧಾ ಯು. ಶೆಟ್ಟಿ ಸ್ವಾಗತಿಸಿ, ದೇವಿಕಾ ಸುಳ್ಯ ನಿರೂಪಿಸಿ, ಜ್ಯೋತಿ ಆರ್. ಶೆಟ್ಟಿ ವಂದಿಸಿದರು.
Subscribe to Updates
Get the latest creative news from FooBar about art, design and business.