ಕಾಸರಗೋಡು : ಕಾಸರಗೋಡಿನ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಆಯೋಜಿಸಿದ ಐದು ದಿನಗಳ ‘ಯುಕ್ಷ ಪಂಚಕ’ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 23-12-2023ರಂದು ಮಂಗಳೂರಿನ ಪಣಂಬೂರಿನಲ್ಲಿರುವ ಶ್ರೀ ನಂದನೇಶ್ವರ ದೇವಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಪಿ. ಅನಂತ ಐತಾಳರು ಮಾತನಾಡಿ “ಯಕ್ಷಗಾನಕ್ಕೆ ಭಾಷೆ ರಾಜ್ಯಗಳ ಬೇಧವಿಲ್ಲ. ಕಾಸರಗೋಡಿನ ಕೊಲ್ಲಂಗಾನವೂ ಮಲೆಯಾಳೀ ಪ್ರದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಶುದ್ಧ ಕನ್ನಡದಲ್ಲಿ ಹಾಗೂ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾ ಜನರಂಜನೆ ಮಾಡುತ್ತಾ ಬರುತ್ತಿದೆ. ನಟನಾಪ್ರಿಯನಾದ ಶ್ರೀ ನಂದನೇಶ್ವರ ದೇವಳದಲ್ಲಿ ಕಳೆದ 7 ವರ್ಷಗಳಿಂದ ‘ಯಕ್ಷ ಪಂಚಕ’ವನ್ನು ನಡೆಯುತ್ತಾ ಬರುತ್ತಿದೆ. ನಾವು ನಮ್ಮ ಕಡೆಯಿಂದ ಪೂರ್ಣ ಬೆಂಬಲ ನೀಡುತ್ತಾ ಬರುತ್ತಿದ್ದೇವೆ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ.” ಎಂದು ಹೇಳಿದರು.
ಹಿರಿಯ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ಐತಾಳರು ದೇವಸ್ಥಾನದ ಪ್ರೋತ್ಸಾಹವನ್ನು ನೆನಪಿಸುತ್ತಾ ಮೇಳಕ್ಕೆ ಶುಭ ಹಾರೈಸಿದರು. ಕಲಾ ಪೋಷಕರಾದ ಶ್ರೀ ಗಣಪತಿ ಐತಾಳ್, ಶ್ರೀ ರಾಜೇಶ್ ಹಾಗೂ ಶ್ರೀ ಸುಬ್ಬರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ರಹ್ಮಶ್ರೀ ಗಣಾಧಿರಾಜ ತಂತ್ರಿಗಳು ಮೇಳದ ಬಗ್ಗೆ ಪ್ರಸ್ತಾವನೆಗೈದರು. ಶ್ರೀ ಸುಮನ್ ರಾಜ್ ನೀಲೇಂಗಳ ಸ್ವಾಗತಿಸಿ. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರು ಕಾರ್ಯಕ್ರಮ ನಿರ್ವಹಿಸಿ, ಶ್ರೀ ಸುಬ್ರಹ್ಮಣ್ಯ ಭಟ್ ಧನ್ಯವಾದವಿತ್ತರು.