ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ- 82’ರ ಕಾರ್ಯಕ್ರಮ ದಿನಾಂಕ 05 ಡಿಸೆಂಬರ್ 2024ರಂದು ತೆಕ್ಕಟ್ಟೆ ಕನ್ನುಕೆರೆಯ ನವಶಕ್ತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಧುವರರಾದ ಸತ್ಯಶ್ರೀ ಹಾಗೂ ಅರುಣ್ ಇವರನ್ನು ಅಭಿವಂದಿಸಿದ ಪ್ರಸಿದ್ಧ ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ ಮಾತನಾಡಿ “ಸಾಂಸ್ಕೃತಿಕ ಕಾರ್ಯಕ್ರಮಗಳು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಸರಿಸಿದಾಗ ಸಾಮಾಜಿಕವಾಗಿ ಬೆಳೆಯುತ್ತದೆ. ಸಾಂಸ್ಕೃತಿಕ ಸ್ಪರ್ಷ ಜೀವನಕ್ಕೆ ಬಹು ಮುಖ್ಯ. ರಾಗ, ತಾಳ, ಲಯಗಳ ಸಮ್ಮಿಳಿತದೊಂದಿಗೆ ಸಾಂಸ್ಕೃತಿಕ ಪಕ್ವತೆಯನ್ನು ಪಡೆಯುವುದು ಹೇಗೋ, ಅದೇ ತರಹ ಜೀವನದಲ್ಲಿಯೂ ಕಷ್ಟ, ಸುಖಗಳ ಸಾಮ್ಯತೆಯನ್ನು ಸಾಧಿಸಿ ಪಕ್ವತೆಯನ್ನು ಸಾಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೀವನದಲ್ಲಿ ಸಮತೋಲನವನ್ನು ಸಾಧಿಸುವುದೇ ಜೀವನಕ್ಕೆ ಬಹುಮುಖ್ಯ.” ಎಂದರು.
ತೆಕ್ಕಟ್ಟೆ ವೆಂಕಟೇಶ ಹತ್ವಾರ್, ಶ್ರೀಮತಿ ಕಲಾವತಿ, ಇಂದಿರಾ, ಶ್ರೀನಿಧಿ ಹತ್ವಾರ್, ಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸ್ಕಂದಾ ಉರಾಳ್, ಪಂಚಮಿ ವೈದ್ಯ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ‘ಯಕ್ಷ ರಸ ಗಾಯನ’ ರಂಗದಲ್ಲಿ ಸಂಪನ್ನಗೊಂಡಿತು.