ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ದ ಸೀತಾ ಪರಿತ್ಯಾಗ ಪ್ರಸಂಗದ ಗಾಯನ-ನೃತ್ಯ ಪ್ರಾತ್ಯಕ್ಷಿಕೆ ‘ಯಕ್ಷ ರಸಾಯನ’ ಕಾರ್ಯಕ್ರಮವು 23-08-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ.ಪುರಾಣಿಕ್ ಇವರು ಕಲಾವಿದರಿಗೆ ಗೌರವಾರ್ಪಣೆ ಸಲ್ಲಿಸಿ ಮಾತನಾಡುತ್ತಾ “ಭಾರತೀಯ ಧರ್ಮ, ಸಂಸ್ಕೃತಿಗಳ ಪ್ರಸಾರ ಕಾರ್ಯದಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ಈವತ್ತು ಜನಸಾಮಾನ್ಯರ ಬಾಯಿಯಲ್ಲೂ ರಾಮಾಯಣ, ಮಹಾಭಾರತ, ಪುರಾಣಗಳ ಕಥೆಗಳು ಹರಿದಾಡುವುದಿದ್ದರೆ ಅದಕ್ಕೆ ಕಾರಣ ಯಕ್ಷಗಾನ. ಯಕ್ಷಗಾನದ ವೀಕ್ಷಣೆ, ಅಭ್ಯಾಸ ನಮ್ಮ ನಡೆನುಡಿಗಳನ್ನು ತಿದ್ದಿ ಉತ್ತಮ ಸಂಸ್ಕಾರ ನೀಡಬಲ್ಲುದು” ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ಕಾರ್ಯಕ್ರಮದ ಮುಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಶ್ರೀ ಸರ್ಪಂಗಳ ಈಶ್ವರ ಭಟ್, ಡಾ. ಶ್ರುತೀಕೀರ್ತಿ ರಾಜ, ಡಾ.ಮಹೇಶ್ ಹಾಗೂ ವಿದ್ಯಾರ್ಥಿ ಚಿ| ಯಕ್ಷ್ ಮೊದಲಾದವರು ಪಾತ್ರ ನಿರ್ವಹಿಸಿದರೆ, ಭಾಗವತಿಕೆಯಲ್ಲಿ ಶ್ರೀಮತಿ ಶಾಲಿನಿ ಹೆಬ್ಬಾರ್, ಚೆಂಡೆಯಲ್ಲಿ ಶ್ರೀ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ವಿದ್ಯಾರ್ಥಿ ಚಿ| ವರುಣ್ ಹೆಬ್ಬಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ ಕುಮಾರ ಕಲ್ಕೂರ, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಸಮೀರ್ ಪುರಾಣಿಕ್, ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಾಬಲೇಶ್ವರ ಭಟ್ ಎಸ್, ಉಪ ಪ್ರಾಂಶುಪಾಲ ಶ್ರೀ ಪ್ರಕಾಶ್ ನಾಯ್ಕ, ಶಿಕ್ಷಕ, ಶಿಕ್ಷಕೇತರ ಬಂಧುಗಳು, ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದ ಮೊದಲಿಗೆ ಕನ್ನಡ ಸಂಘದ ಅಧ್ಯಕ್ಷರಾದ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಸತ್ಯಮೂರ್ತಿ ಕೆ.ಎಂ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ಯಶೋದಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.