ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಉಡುಪಿ, ಯಕ್ಷಗಾನ ಕೇಂದ್ರ ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಮತ್ತು ಉಜ್ವಲ್ ಡೆವಲಪರ್ಸ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19 ಜುಲೈ 2025ರಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ‘ಯಕ್ಷ ಸಾಧಕ’ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಇವರಿಗೆ ಪ್ರದಾನಿಸಿ ಮಾತನಾಡಿದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ಯಕ್ಷಗಾನ ಕಲೆಯ ಬಗ್ಗೆ ಯುವ ಜನಾಂಗಕ್ಕೆ ಆಸಕ್ತಿ ಮೂಡಿಸುವ ಮೂಲಕ ಕಲೆಯನ್ನು ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ. ಗುರು ವೀರಭದ್ರ ನಾಯಕ್ ಇವರು ಯಕ್ಷಗಾನ ಕ್ಷೇತ್ರದ ದೊಡ್ಡ ಸಾಧಕ, ಶ್ರೇಷ್ಟ ಕಲಾವಿದೆ. ಅವರ ಹೆಸರಿನ ಈ ಪ್ರಶಸ್ತಿಯನ್ನು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಲವಳ್ಳಿ ವಿದ್ಯಾಧರ ರಾವ್ ಇವರಿಗೆ ನೀಡುತ್ತಿರುವುದು ಬಹಳ ಪ್ರಸ್ತುತ” ಎಂದು ಹೇಳಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಮಾತನಾಡಿ “ಯಕ್ಷಗಾನ ಕಲೆಯ ಉಳಿವು ಹಾಗೂ ಕಲಾವಿದರಿಗೆ ಟ್ರಸ್ಟ್ ಮೂಲಕ ಉತ್ತೇಜನ ನೀಡುವ ಕೆಲಸವಾಗುತ್ತಿದ್ದು, ಯಕ್ಷಗಾನಕ್ಕೆ ಸರ್ವ ರೀತಿಯಿಂದಲೂ ಇನ್ನಷ್ಟು ಪ್ರೋತ್ಸಾಹ ಸಿಗಬೇಕು” ಎಂದರು.
ಉಜ್ವಲ್ ಡೆವಲಪರ್ಸ್ ಪ್ರವರ್ತಕ ಪಿ. ಪುರುಷೋತ್ತಮ ಶೆಟ್ಟಿ, ಪೆರ್ಡೂರು ಮೇಳದ ಮಾಲೀಕ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರನ್ನು ಗೌರವಿಸಲಾಯಿತು. ಗುರು ಉಮೇಶ್ ಸುವರ್ಣ ಪ್ರಾರ್ಥಿಸಿ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆಯವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯ ಭುವನ ಪ್ರಸಾದ್ ಹೆಗ್ಡೆ ಅಭಿನಂದನ ಭಾಷಣ ಮಾಡಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾವಿದರ ಕೂಡುವಿಕೆಯಲ್ಲಿ ‘ಕೃಷ್ಣಾರ್ಜುನ ಕಾಳಗ’ ಮತ್ತು ‘ರಾಜಾ ಭದ್ರಸೇನ’ ಯಕ್ಷಗಾನ ಪ್ರದರ್ಶನಗೊಂಡಿತು.