ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ‘ಯಕ್ಷ ಸಂಭ್ರಮ-2023’ ಕಾರ್ಯಕ್ರಮವು ದಿನಾಂಕ 02-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ “ಜ್ಞಾನದ ಭಂಡಾರವಾದ ವೇದ, ಉಪನಿಷತ್ತು, ಪುರಾಣ ಕಥೆಗಳು ಯಕ್ಷಗಾನದ ಮೂಲಕ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ. ನಮ್ಮ ದೇಶದ ಸಂಸ್ಕೃತಿ, ಧರ್ಮ ರಕ್ಷಣೆಯಲ್ಲಿ ಯಕ್ಷಗಾನದ ಪಾತ್ರವು ಅನನ್ಯವಾದದು” ಎಂದು ಹೇಳಿದರು.
ಜಮ್ಮು ಕಾಶ್ಮೀರದ ಪವರ್ ಡಿಪಾರ್ಟ್ಮೆಂಟ್ ಇದರ ಪ್ರಿನ್ಸಿಪಾಲ್ ಸೆಕ್ರೆಟರಿ ಹಿರಿಯಡ್ಕ ರಾಜೇಶ್ ಪ್ರಸಾದ್ ಮಾತನಾಡಿ, “ಕರಾವಳಿಯ ವಿಶಿಷ್ಟ ಕಲೆ ಯಕ್ಷಗಾನದ ಮೇಲೆ ಜನರ ಪ್ರೀತಿ, ವಿಶ್ವಾಸ ನಿರಂತರ ಇರಬೇಕು. ಇಂದಿನ ಜೀವನ ಶೈಲಿಯಲ್ಲಿ ಜನರಲ್ಲಿ ದೇವ-ದಾನವ ಎರಡು ಗುಣಗಳು ಸೇರಿವೆ. ದಾನವ ಗುಣಕ್ಕೆ ಎಂದು ಜಯವಿಲ್ಲ ಎಂಬುದನ್ನು ಯಕ್ಷಗಾನ ತಿಳಿಸಿಕೊಡುತ್ತದೆ. ಅಂತರಾತ್ಮದಲ್ಲಿರುವ ಕೆಟ್ಟ ಗುಣ ತೊಡೆದು ಹಾಕಿ ಮುನ್ನಡೆದರೆ ಜೀವನ ಸಾರ್ಥಕತೆ ಪಡೆಯುತ್ತದೆ” ಎಂದರು.
ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಭಾರತದ ಮುಕುಟ ಪ್ರಾಯವಾದ ಜಮ್ಮು ಕಾಶ್ಮೀರದ ವೈಷ್ಣೋದೇವಿಯಲ್ಲೂ ಈ ಬಾರಿ ನವರಾತ್ರಿಯ ಸಂದರ್ಭ ಯಕ್ಷಗಾನ ತನ್ನ ಛಾಪನ್ನು ಮೂಡಿಸಿದೆ. ದಾನಿಗಳ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಕಲಾವಿದರಿಗೆ ವಿಶೇಷ ಶಕ್ತಿಯನ್ನು ನೀಡಲು ಶ್ರಮಿಸುತ್ತಿದೆ ಎಂದರು.
ಯಕ್ಷ ಪಟ್ಲ ಘಟಕ ಬೆಳ್ತಂಗಡಿಯ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಎಂ.ಎಲ್.ಸಿ. ಪ್ರತಾಪಸಿಂಹ ನಾಯಕ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ ಕಾರಂತ್ ಶುಭ ಹಾರೈಸಿದರು. ಬೆಳ್ತಂಗಡಿ ಘಟಕದ ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಕಾರ್ಯದರ್ಶಿ ಶಿತಿಕಂಠ ಭಟ್, ಕೋಶಾಧಿಕಾರಿ ಆದರ್ಶ್ ಜೈನ್ ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿ, ಪಿ.ಡಿ.ಒ. ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿ, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು.
ಭಾಗವತ ಮೋಹನ್ ಬೈಪಡಿತ್ತಾಯ, ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಭತ್ತದ ತಳಿ ಸಂರಕ್ಷಕ ಕೃಷಿಕ ಬಿ.ಕೆ. ದೇವರಾಯ ಅಮೈ ಮಿತ್ತಬಾಗಿಲು ಇವರುಗಳಿಗೆ ‘ಯಕ್ಷ ಸಂಭ್ರಮ- 2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬದುಕು ಕಟ್ಟೋಣ ಬನ್ನಿ ತಂಡದ ರೂವಾರಿ ಮೋಹನ್ ಕುಮಾರ್, ಉದ್ಯಮಿಗಳಾದ ಅರ್ಚನಾ ರಾಜೇಶ್ ಪೈ ಉಜಿರೆ ಮತ್ತು ಭರತ್ ಕುಮಾರ್ ಉಜಿರೆ ಅವರನ್ನು ಸನ್ಮಾನಿಸಲಾಯಿತು.
22 ಭಜನಾ ತಂಡಗಳ ಕುಣಿತ ಭಜನೆ, ಚೆಂಡೆ, ಬ್ಯಾಂಡ್, ಕೊಂಬು, ಸ್ಯಾಕ್ಸೋಫೋನ್, ಆಕರ್ಷಕ ಸುಡುಮದ್ದು ಪ್ರದರ್ಶನ ಮತ್ತು ವಿವಿಧ ವೇಷ ಭೂಷಣಗಳೊಂದಿಗೆ ಉಜಿರೆಯ ಓಶಿಯನ್ ಪರ್ಲ್ನಿಂದ ಜನಾರ್ದನ ದೇವಸ್ಥಾನದವರೆಗೆ ವೈಭವದ ಮೆರವಣಿಗೆ ಜರಗಿತು. ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಜರಗಿತು. ಏಕಕಾಲದಲ್ಲಿ ಹತ್ತು ಮಹಿಷಾಸುರರ ಬಾಲಲೀಲೆಯ ಆಟಗಳೊಂದಿಗೆ ಸಭಾ ಪ್ರವೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಯಕ್ಷಗಾನ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆ ಇರುವ ಇಂದಿನ ಕಾಲದಲ್ಲಿಯೂ 10,000ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು.