ಬೆಂಗಳೂರು : ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯ ‘ಯಕ್ಷ ಸಂಕ್ರಾಂತಿ’ ಭಾವ ಬಣ್ಣಗಳ ಒಡ್ಡೋಲಗ ದಿನಾಂಕ 18-11-2023ರಂದು ರಾತ್ರಿ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ‘ಭೀಷ್ಮ ಪರ್ವ’ ಯಕ್ಷಗಾನ ಪ್ರಸಂಗದಲ್ಲಿ ಭೀಷ್ಮನಾಗಿ ಕೃಷ್ಣ ಯಾಜಿ ಬಳ್ಕೂರು, ಕೃಷ್ಣನಾಗಿ ವಿಶ್ವನಾಥ್ ಹೆನ್ನಾಬೈಲ್, ಅರ್ಜುನನಾಗಿ ಚಂದ್ರಹಾಸ ಹೊಸಪಟ್ಣ ಮತ್ತು ಧರ್ಮರಾಯನಾಗಿ ಮಂಜುನಾಥ ರಾವ್ ಚೌಕುಳಮಕ್ಕಿ ಪಾತ್ರ ನಿರ್ವಹಿಸಲಿದ್ದಾರೆ.
ಭೀಷ್ಮನ ಬದುಕು, ಅದೆಷ್ಟು ಒಗಟುಗಳ ಸಂಕಥನ ! ಭೀಷ್ಮನಿಗಿಂತ ಮುಂಚೆ ಹುಟ್ಟಿದ ಏಳು ಮಂದಿ ಮಕ್ಕಳನ್ನು ಹೆತ್ತಬ್ಬೆ ಗಂಗಾ ಭವಾನಿ ನದಿಗೆಸೆಯುವಾಗ, ಸ್ತ್ರೀ ವ್ಯಾಮೋಹದಿಂದ ಖಂಡಿಸದೇ ಉಳಿದವನು ಶಂತನು!. ಭೀಷ್ಮನ ಸರದಿ ಬಂದಾಗ, ಈ ಮಗು ಬೇಕು ಎನ್ನುತ್ತಾನೆ ಶಂತನು. ಆ ಕಾರಣಕ್ಕಾಗಿ ಗಂಗೆ ದೂರವಾಗುತ್ತಾಳೆ, ಮಗ ಬದುಕುಳಿಯುತ್ತಾನೆ!. ತಂದೆಗೋಸುಗ ಸತ್ಯವತಿಯನ್ನು ಕರೆ ತರುವಾಗ ಕಂದರನ ಇಚ್ಚೆಯಂತೆ ವ್ಯವಹರಿಸುತ್ತಾನೆ ದೇವವ್ರತ. ವಧುವನ್ನು ಮನೆ ತುಂಬಿಕೊಳ್ಳುವ ಸಲುವಾಗಿ, ಆಡಿದ ಮಾತಿನಂತೆ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾನೆ. ಆದರೆ ಹಸ್ತಿನಾವತಿಗೆ ಒಳಪಡದೆ ಸ್ವತಂತ್ರ ರಾಜ್ಯವಾಗಿದ್ದ ಕಾಶಿಯ ಪ್ರತಾಪಸೇನ ತನ್ನ ಮಕ್ಕಳನ್ನು ಮದುವೆ ಮಾಡಲು ಹೊರಟಾಗ ಭೀಷ್ಮನೇ ಅಡ್ಡಿಯಾಗುತ್ತಾನೆ !. ಸಾಮಂತರ ಎತ್ತಿಕಟ್ಟುವಿಕೆ, ಹಸ್ತಿನಾವತಿಗೆ ಪ್ರತಿ ಪೀಠ ಎಂಬಂತಹ ಹಲವು ಕಾರಣಗಳನ್ನು ಗುರು ಪರಶುರಾಮರಿಗೆ ನೀಡುತ್ತಾನೆ. ಒಂದು ವೇಳೆ ಸ್ವಯಂವರ ಜರುಗಿ ಅಲ್ಲಿ ಗೆದ್ದಾತನನ್ನು ತಾನು ಗೆಲ್ಲಲ್ಲು ಅಸಾಧ್ಯ ಎಂಬ ಭಯ ಭೀಷ್ಮನಿಗೆ ಇದ್ದಿತ್ತೆ!? ಖಂಡಿತಕ್ಕೂ ಇರಲಿಕ್ಕಿಲ್ಲ, ದೊಡ್ಡವರ ನಡೆಗೆ ಒಂದು ಸಣ್ಣ ಕಾರಣಗಳಷ್ಟೆ.
ಹಾಗಂತ ಅಷ್ಟೆಲ್ಲ ಜತನದಿಂದ ಕಾಪಿಟ್ಟುಕೊಂಡು ಬಂದ ಹಸ್ತಿನಾವತಿಯ ಸಾಮ್ರಾಜ್ಯವು ವ್ಯಾಜ್ಯಗಳಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಭೀಷ್ಮಾಚಾರ್ಯರಿಂದಲೂ ಆಗಲಿಲ್ಲ. ದ್ರುಪದ ನಂದನೆಯ ಸೀರೆ ಸೆಳೆವಾಗ ಭೀಷ್ಮರು ತಾಳಿದ ಮೌನ, ಈಗಲೂ ಜಿಜ್ಞಾಸೆಯಾಗಿಯೆ ಉಳಿದಿದೆ!. ಕುರುಕ್ಷೇತ್ರದಲ್ಲಿ ಕೌರವ ಪಾಳಯದಲ್ಲಿ ಪ್ರಥಮ ಸೇನಾಧಿಪತಿಯಾಗುವ ಭೀಷ್ಮ, ಶ್ರೀಕೃಷ್ಣನ ಪರಮಭಕ್ತ. ಕೃಷ್ಣ ಹುಟ್ಟುವ ಪೂರ್ವದಲ್ಲೇ, ಆಳೆತ್ತರದ ವಾಸುದೇವ ಮೂರ್ತಿಯನ್ನು ಆರಾಧಿಸುವ ಭಗವಧ್ಭಕ್ತ ಭೀಷ್ಮನಾಗಿ ಕೃಷ್ಣಯಾಜಿ ಬಳ್ಕೂರು ಅವರು ಕಾಣಿಸಿಕೊಳ್ಳಲಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಯಾಜಿಯವರ ಭೀಷ್ಮ ಕಾಣದೇ ಎಷ್ಟು ವರ್ಷಗಳು ಆಗಿರಬಹುದು? ಈ ಪ್ರಸಂಗ ಎಲ್ಲರೂ ಇಡುವುದಿಲ್ಲ, ಇಟ್ಟಾಗ ಮರೆಯದೇ ಕಣ್ತುಂಬಿಕೊಳ್ಳಿ. ಕೊಳಗಿಯವರ ಭಾಗವತಿಕೆ, ಯಾಜಿಯವರ ಭೀಷ್ಮ, ಹೆನ್ನಾಬೈಲ್ ಕೃಷ್ಣ ಈ ಕಾಂಭಿನೇಷನ್ ಮಿಸ್ ಮಾಡಿಕೊಳ್ಳಬೇಡಿ.