ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 23-08-2023ರಂದು ಯಕ್ಷಶಿಕ್ಷಣ ಉದ್ಘಾಟನೆಗೊಂಡಿತು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಎರಡು ವರ್ಷದಿಂದ ವಿದ್ಯಾರ್ಥಿಯಾಗಿದ್ದುಕೊಂಡು, ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಅಭ್ಯಾಸ ಮಾಡಿದ ಅಬ್ದುಲ್ ರವೂಫ್ ಇವರು ಈ ಶಾಲೆಯ ಮುಖ್ಯೋಪಾಧ್ಯಾಯರಾಗಿರುವುದು ನಾವೆಲ್ಲ ಹೆಮ್ಮೆ ಪಡುವಂತ ವಿಚಾರವಾಗಿದೆ ಎಂದು ಶುಭಕೋರಿದರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯರಾದ ರಾಘವೇಂದ್ರ ಶೆಟ್ಟಿ ಅಭ್ಯಾಗತರಾಗಿ ಶುಭಕೋರಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಶ್ರೀ ಉದಯ್ ಕುಮಾರ್ ಶೆಟ್ಟಿಯವರು ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ರಾಘವೇಂದ್ರ ಡಿ. ಧನ್ಯವಾದ ಸಮರ್ಪಿಸಿದರು. ಯಕ್ಷಗಾನ ಗುರುಗಳಾದ ಐರೋಡಿ ಶ್ರೀ ಮುಂಜುನಾಥ ಕುಲಾಲ್ ಇವರು ಬಾಲ ಗೋಪಾಲ ಮತ್ತು ಶ್ರೀಕೃಷ್ಣನ ಒಡ್ಡೋಲಗವನ್ನು ಮಾಡಿ ಕಾರ್ಯಕ್ರಮಕ್ಕೆ ಯಕ್ಷಗಾನೀಯ ಸ್ಪರ್ಶವನ್ನು ನೀಡಿದರು. ಈ ಶಾಲೆಯ 35 ವಿದ್ಯಾರ್ಥಿಗಳು ಯಕ್ಷಶಿಕ್ಷಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.