ಮಂಗಳೂರು : ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ, ಯಕ್ಷಾವಾಸ್ಯಮ್ ಕಾರಿಂಜ (ರಿ.), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ವಿಭಾಗ ಮತ್ತು ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ‘ಯಕ್ಷ ಸುಮತಿ 2024’ ರಾಜ್ಯ ಮಟ್ಟದ ಯಕ್ಷಗಾನ ಮಹಿಳಾ ಕಲಾವಿದೆಯರ ಸಾಧನೆಯ ಸಂಭ್ರಮದ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 16-03-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವನ್ನು ಮಾನ್ಯ ವಿಧಾನ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಉದ್ಘಾಟನೆ ಮಾಡಲಿದ್ದು, ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಷನ್ ಇವರ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರು ದೀಪೋಜ್ವಲನ ಮಾಡಲಿರುವರು. ಬೆಳಗ್ಗೆ ಗಂಟೆ 9-45ರಿಂದ ‘ಯಕ್ಷಗಾನದಲ್ಲಿ ಮಹಿಳೆ : ನಿನ್ನೆ-ಇಂದು-ನಾಳೆ’, ‘ಯಕ್ಷಗಾನದಲ್ಲಿ ಮಹಿಳಾ ಸಂವೇದನೆ’ ಹಾಗೂ ‘ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಮಹಿಳೆ’ ಎಂಬ ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ 1.45ರಿಂದ ಕಲಾವಿಸ್ಮಯ ಸಾಲಿಗ್ರಾಮ ಇವರು ಯಕ್ಷ ಸುಮತಿ ಪರಿಕಲ್ಪನೆಯ ಯಕ್ಷಗಾನ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಗಂಟೆ 2.30ರಿಂದ ವಿಚಾರಗೋಷ್ಠಿ ನಡೆಯಲಿದೆ. ಗಂಟೆ 3.30ಕ್ಕೆ ‘ಅಬ್ಬರತಾಳ’ವನ್ನು ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಇವರ ನಿರ್ದೇಶನದಲ್ಲಿ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಳಕಲ ಇದರ ಮಹಿಳಾ ಕಲಾವಿದೆಯವರು ಪ್ರಸ್ತುತ ಪಡಿಸಲಿದ್ದಾರೆ.
ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಇವರಿಗೆ ‘ಗೌರವ ಸಮರ್ಪಣೆ’, ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಎಂ.ಕೆ. ರಮೇಶ್ ಆಚಾರ್ಯ, ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ನಿಶಾಂತ್ ಆಗಶೆ ಹಾಗೂ ಉದ್ಯಮಿಯಾದ ಶ್ರೀ ನಿರಂಜನ್ ಜೈನ್ ಇವರಿಗೆ ‘ಸಂಸ್ಥೆಯ ಗೌರವ’ ಮತ್ತು ಮಣಿಪಾಲದ ಎಂ.ಐ.ಟಿ.ಯ ಉಪನ್ಯಾಸಕರಾದ ಪ್ರೊ. ಎಸ್.ವಿ. ಉದಯ ಕುಮಾರ ಶೆಟ್ಟಿ, ಯಕ್ಷಗಾನ ವಿಮರ್ಶಕರಾದ ಶ್ರೀ ಎಂ. ಶಾಂತಾರಾಮ ಕುಡ್ವ ಹಾಗೂ ಶಿರೂರು ಫಣಿಗಿರಿ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀ ಉಮೇಶ್ ಶಿರೂರು ಇವರುಗಳಿಗೆ ‘ನಾದ ನೂಪುರ ಪತ್ರಿಕಾ ಗೌರವ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಂಜೆ ಗಂಟೆ 6ಕ್ಕೆ ಶ್ರೀಮತಿ ಪೂರ್ಣಿಮ ಯತೀಶ್ ರೈ ಇವರ ನಿರ್ದೇಶನದಲ್ಲಿ ಶುಭಾಶಯ ಜೈನ ವಿರಚಿತ ‘ತ್ಯಾಗೊದ ತಿರ್ಲ್’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.