ಮಂಜೇಶ್ವರ : ಮೀಯಪದವು ಶ್ರೀಗುರುನರಸಿಂಹ ಯಕ್ಷಬಳಗ ಕಲಾಸಂಸ್ಥೆ ಹಾಗೂ ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಶ್ರೀಕ್ಷೇತ್ರದ ವಠಾರದಲ್ಲಿ ದಿನಾಂಕ 13 ಸೆಪ್ಟೆಂಬರ್ 2025ರಂದು ‘ಯಕ್ಷಚಿಗುರು -2025’ ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಂಜನೀಯವಾಗಿ ಹಮ್ಮಿಕೊಂಡಿತ್ತು. ಕುಣಿತ ಭಜನೆ, ಸಭಾ ಸಮಾರಂಭ, ಯಕ್ಷಚಿಗುರು 2025 ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತು.
ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಮೀಯಪದವು ತಂಡದ ಸದಸ್ಯರಿಂದ ಕುಣಿತ ಭಜನೆಯನ್ನು ಚಿಗುರುಪಾದೆ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನಗೈದು, ಯಕ್ಷಚಿಗುರು-2025 ಪ್ರಶಸ್ತಿಯನ್ನು ‘ಶ್ರೀ ಧನ್ವಂತರೀ ಯಕ್ಷಗಾನ ಸಂಘ ಉಳಿಯ ಮಧೂರು’ ಸಂಘಟನೆಗೆ ಪ್ರದಾನಗೈದು ಮಾತನಾಡಿ, “ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾದದ್ದು. ಯಕ್ಷಗಾನ, ತಾಳಮದ್ದಳೆ ಪ್ರಕಾರಗಳು ಇಂದಿಗೂ ಆ ಕಾರಣಕ್ಕಾಗಿಯೇ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ. ಯಕ್ಷಗಾನ ರಂಗಕ್ಕೆ ಹವ್ಯಾಸಿ ಯಕ್ಷಗಾನ ತಂಡಗಳು, ಸಂಸ್ಥೆಗಳು ಅತಿದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಉಳಿಯ ಧನ್ವಂತರಿ ಯಕ್ಷಗಾನ ಸಂಘ ಕಳೆದ 60 ವರ್ಷಗಳಿಂದ ನಿರಂತರವಾಗಿ ವಾರದ ಕೂಟಗಳನ್ನು ನಡೆಸುತ್ತ ದೊಡ್ಡ ಸಾಧನೆಗೈಯುತ್ತಾ ಬಂದಿದೆ. ಬಹುಮುಖಿ ಚಟುವಟಿಕೆಗಳೊಂದಿಗೆ ಗುರುನರಸಿಂಹ ಯಕ್ಷ ಬಳಗ ಯಕ್ಷಗಾನ ಕಲೆಗೆ ಉತ್ತಮ ಕೊಡುಗೆ ನೀಡುತ್ತಿದೆ” ಎಂದು ಅಭಿಪ್ರಾಯಪಟ್ಟರು.
ಉದ್ಯಮಿ ಪಿ.ಆರ್. ಶೆಟ್ಟಿ. ಪೊಯ್ಯೇಲು ಕುಳೂರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಗೌರವ ಉಪಸ್ಥಿತರಿದ್ದರು. ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಹೇರೂರು ವಿಷ್ಣುಮೂರ್ತಿ ದೇವಸ್ಥಾನ ತಾಡ ಕ್ಷೇತ್ರದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ. ಹೇರೂರು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಕುಳೂರು ಪೊಯ್ಯೇಲು, ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಎಲಿಯಾಣ ಕುಳೂರು ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯೋಜಕತ್ವದಲ್ಲಿ ಕೀರ್ತಿಶೇಷ ಶ್ರೀನಿವಾಸ ರಾವ್ ಮದಂಗಲ್ಲು ಅವರ ಸಂಸ್ಮರಣೆ ಹಿರಿಯರ ನೆನಪು ಜರಗಿತು. 2025ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಎಲಿಯಾಣ ಕುಳೂರು ಹಾಗೂ ಹಿರಿಯ ಭಜನಾ ಸಂಕೀರ್ತನಕಾರ ವಸಂತ ಭಟ್ ತೊಟ್ಟೆತ್ತೋಡಿ ಇವರನ್ನು ಗಣ್ಯರ ಸಮಕ್ಷಮ ಗೌರವಿಸಿ ಅಭಿನಂದಿಸಲಾಯಿತು.
ಅಪರಾಹ್ನ ನಾಡಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಮಾಗದ ವಧೆ’ ಪ್ರಸ್ತುತಿಗೊಡಿತು. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಲವಕುಮಾರ್ ಐಲ, ವಿಕ್ರಂ ಮಯ್ಯ ಪೈವಳಿಕೆ, ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್ ಮಧೂರು, ಶ್ರೀಕೃಷ್ಣ ಭಟ್ ದೇವಕಾನ ಪ್ರೇಕ್ಷಕರನ್ನು ರಂಜಿಸಿದರು. ಸಂಜೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದವರಿಂದ ‘ರುಕ್ಮಾಂಗದ ಚರಿತ್ರೆ’ ಯಕ್ಷಗಾನ ಬಯಲಾಟ ಪ್ರಸ್ತುತಿಗೊಂಡಿತು.