ಮೂಡುಬಿದಿರೆ : ಶ್ರೀ ಯಕ್ಷದೇಗುಲ ಕಾಂತಾವರ (ರಿ.)ದ ಇಪ್ಪತ್ತೊಂದನೇ ವಾರ್ಷಿಕ ‘ಯಕ್ಷೋಲ್ಲಾಸ 2023’ ಕಾರ್ಯಕ್ರಮವು ಶ್ರೀ ಕ್ಷೇತ್ರ ಕಾಂತಾವರದಲ್ಲಿ ದಿನಾಂಕ 23-07-2023ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಂತಾವರ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ಮಾತನಾಡುತ್ತಾ “ಕಷ್ಟ ಕಾಲದಲ್ಲಿ ಜೀವನಕ್ಕಾಗಿ ಯಕ್ಷಗಾನವನ್ನು ನಂಬಿ ಬದುಕು ಸಾಗಿದ ಅದೆಷ್ಟೋ ಕಲಾವಿದರು ಈಗಿಲ್ಲ. ಆದರೂ ಅವರು ಉಳಿಸಿದ ಈ ಯಕ್ಷಗಾನ ಇಂದಿಗೂ ಶ್ರೀಮಂತವಾಗಿದೆ. ಪುತ್ತೂರು ಶ್ರೀಧರ ಭಂಡಾರಿ ತಂಬಾ ಕಷ್ಟದಿಂದ ನಮ್ಮೂರಿನ ಸ್ವಂತ ಮೇಳ ಮಾಡಿಕೊಂಡು ನಷ್ಟ ಹೊಂದಿದಾಗ ಮತ್ತೆ ಮಾತೃ ಸಂಸ್ಥೆ ಧರ್ಮಸ್ಥಳ ಮೇಳಕ್ಕೆ ಹೋಗು. ಅಲ್ಲಿ ನಿನ್ನ ಸ್ಥಾನ ಇನ್ನೂ ಖಾಲಿ ಇದೆ ಎಂದು ಹೇಳಿ ಕಳುಹಿಸಿದವನೇ ನಾನು. ಶ್ರೀಧರ ಭಂಡಾರಿಯಿಂದಾಗಿ ನಮ್ಮ ಕ್ಷೇತ್ರಕ್ಕೂ ತುಂಬಾ ಹೆಸರು ಬರುವಂತಾಯಿತು.” ಎಂದು ಹೇಳಿದರು.
ವರ್ಕಾಡಿ ತಾರಾನಾಥ ಬಲ್ಯಾಯರಿಗೆ ‘ಪುತ್ತೂರು ಶ್ರೀ ಶ್ರೀಧರ ಭಂಡಾರಿ ಸಂಸ್ಕರಣಾ ಪ್ರಶಸ್ತಿ’ ಹಾಗೂ ವೇಣೂರು ಶ್ರೀ ಸದಾಶಿವ ಕುಲಾಲ್ ಅವರಿಗೆ ‘ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಕರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
“ನಮ್ಮ ಮಕ್ಕಳಿಗೆ ಶಿಕ್ಷಣದಲ್ಲಿ ಸಿಗಬೇಕಾದ ಸಂಸ್ಕಾರ, ಜೀವನ ಮೌಲ್ಯ ಮತ್ತು ಭಾಗವತ-ರಾಮಾಯಣದ ನೀತಿ ಪಾಠ ಯಕ್ಷಗಾನ ಮಾಧ್ಯಮದಲ್ಲಿ ಸಿಗುವುದು ನಮ್ಮ ಭಾಗ್ಯ.” ಎಂದು ನಿಟ್ಟೆ ಕಾಲೇಜಿನ ಪ್ರೊ. ಸುಧೀರ್ ಎಂ. ಅಭಿಪ್ರಾಯಪಟ್ಟರು. ಧರ್ಮಸ್ಥಳದ ಬಿ. ಭುಜಬಲಿ, ಉದ್ಯಮಿ ಎ.ಕೆ. ರಾವ್, ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಉಪಸ್ಥಿತರಿದ್ದರು. ಡಾ. ಶ್ರುತಕೀರ್ತಿ ರಾಜ್ ಉಜಿರೆ ಮತ್ತು ಡಾ. ವಾದಿರಾಜ ಕಲ್ಲೂರಾಯ ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಿದರು.
ಈ ಕಾರ್ಯಕ್ರಮವನ್ನು ಬಾರಾಡಿ ಬೀಡು ಮಾತೃಶ್ರೀ ಸುಮತಿ ಆರ್. ಬಲ್ಲಾಳ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿ, ಭಾಗವತ ಶಿವಪ್ರಸಾದ್ ಭಟ್ ವಂದಿಸಿದರು. ನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ರಂಗ ತುಲಾಭಾರ’ ತಾಳಮದ್ದಳೆ ನಡೆಯಿತು.