ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 9-30ರಿಂದ ರಾತ್ರಿ 11-00ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ಗಂಟೆ 9-30ಕ್ಕೆ ಉದ್ಘಾಟನ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸುವರು. ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಉಪಸ್ಥಿತಲಿರುವರು. ಬೆಳಗ್ಗೆ 11-00ಕ್ಕೆ ಡಾ. ಎಂ. ಮೋಹನ ಆಳ್ವ ಇವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸುವರು. ಡಾ. ಆಳ್ವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ, ಯಕ್ಷಧ್ರುವ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಮತ್ತು ಯಕ್ಷಧ್ರುವ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಿಂದ ಯಕ್ಷಗಾನ ನಡೆಯಲಿದೆ.
ಮಧ್ಯಾಹ್ನ 1-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಎಂ.ಆರ್.ಜಿ. ಗ್ರೂಪ್ ಸಿ.ಎಂ.ಡಿ. ಡಾ. ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮ ತಾರಾ ಮೆರುಗು ನೀಡುವರು. ಸಂಜೆ 5-30ಕ್ಕೆ ಸಮಾರೋಪದಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಡಿ.ಸಿ.ಎಂ. ಡಿ.ಕೆ. ಶಿವಕುಮಾರ್ ಭಾಗವಹಿಸುವರು. ಮುಂಬಯಿನ ಹೇರಂಭ ಇಂಡಸ್ಟ್ರೀಸ್ ಸಿ.ಎಂ.ಡಿ. ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಎಂಟು ತಂಡಗಳಿಂದ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ಮತ್ತು ಭರತನಾಟ್ಯ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ವೈದ್ಯಕೀಯ ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ ನಡೆಯಲಿದೆ. ಟ್ರಸ್ಟಿನಿಂದ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ, 87 ಸರಕಾರಿ ಪ್ರೌಢಶಾಲೆಗಳ 9500 ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆಯಡಿ ಯಕ್ಷಗಾನ ಕಲಿಸಲಾಗುತ್ತಿದೆ.
‘ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ’ಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಶೆಟ್ಟಿ ದಂಪತಿಗೆ ಹಾಗೂ ಒಂದು ಲಕ್ಷ ರೂ. ಗೌರವಧನ ಒಳಗೊಂಡ ‘ಯಕ್ಷಧ್ರುವ ಪಟ್ಟ ಪ್ರಶಸ್ತಿ’ಯನ್ನು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ 20,000 ರೂ. ನಗದು ಸಹಿತ ‘ಯಕ್ಷಧ್ರುವ ಕಲಾ’ ಗೌರವ ನೀಡಲಾಗುವುದು.