ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ 39ನೇ ಗೋವಾ ಘಟಕವನ್ನು ಪಣಜಿ ಇನ್ಸಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 02-11-2023ರಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು “ಕನ್ನಡದ ಶುದ್ಧ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ಧಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡುಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ಧತೆಯೂ ಇದೆ. ಇಂದು ಯುವ ಸಮುದಾಯ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕತೆಗಳನ್ನು ತಿಳಿದುಕೊಳ್ಳುವ ಆಸಕ್ತಿಯೂ ಯುವ ಸಮುದಾಯಕ್ಕೆ ಇದೆ. ಯಕ್ಷಗಾನ ಮೇಲ್ಪಂಕ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ. ಯಕ್ಷಗಾನವನ್ನು ಆರಾಧಿಸೋಣ, ಪ್ರೀತಿಸೋಣ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ 40ನೇ ಘಟಕವನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗುವುದು” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಪ್ರಧಾನ ಸಂಚಾಲಕ, ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಮಾತನಾಡಿ “ಮುಂದಿನ ವರ್ಷ ಗೋವಾದ ಬೀಚ್ ಬಳಿ ಪಟ್ಲ ಫೌಂಡೇಶನ್ನಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು” ಎಂದರು.
ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “ಗೋವಾದಲ್ಲಿ ಘಟಕ ಸ್ಥಾಪಿಸುವುದು ಬಹುದಿನಗಳ ಕನಸಾಗಿತ್ತು. ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಜವಾಬ್ದಾರಿ ಹೊತ್ತು ಘಟಕ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಗೋವಾ ಘಟಕದಡಿ ಅನೇಕ ಯಕ್ಷಗಾನಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮಗಳು ನಡೆಯಲಿ” ಎಂದರು. ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕಂಬಳ ವಿಭಾಗದ ಅಶೋಕ್ ಶೆಟ್ಟಿ ಬೇಲಾಡಿ, ಸದಾನಂದ ಶೆಟ್ಟಿ ಬೆಳುವಾಯಿ, ಮಾಜಿ ರಣಜಿ ಆಟಗಾರ ಜಯೇಶ್ ಶೆಟ್ಟಿ ಗೋವಾ, ಯಕ್ಷಗಾನ ಭಾಗವತರಾದ ಸದಾಶಿವ ಅಮೀನ್ ಕೊಕ್ಕರ್ಣೆ, ಯಕ್ಷಗಾನ ಪಾತ್ರಧಾರಿಗಳಾದ ನವೀನ್ ಶಾನುಭೋಗ್, ಮಹಾಬಲ ಭಟ್ ಗೋವಾ ಇವರನ್ನು ಸನ್ಮಾನಿಸಲಾಯಿತು. ಅಮೃತೇಶ್ವರಿ ಮೇಳದ ಸತೀಶ್ ಮೊಗವೀರ ಹಾಲಾಡಿ, ಕಮಲಶಿಲೆ ಮೇಳದ ವಿಶ್ವನಾಥ ಪೂಜಾರಿ ಹೆನ್ನಾಬೈಲ್, ಮಾರಣಕಟ್ಟೆ ಮೇಳದ ರಾಕೇಶ್ ಶೆಟ್ಟಿ ಮೇಗರಹಳ್ಳಿ ಇವರಿಗೆ ಸನ್ಮಾನಿಸಿ ಆರ್ಥಿಕ ನೆರವು ನೀಡಲಾಯಿತು.
ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ, ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ ನಾಯ್ಕ್, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ, ಗೋವಾ ನಾರಾಯಣ ಗುರು ಸೇವಾ ಟ್ರಸ್ಟಿನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ, ಚಲನಚಿತ್ರ ನಟ ಪ್ರಸನ್ನ ಶೆಟ್ಟಿ ಬೈಲೂರು, ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು, ಗೌರಾವಾಧ್ಯಕ್ಷ ವಿಜಯೇಂದ್ರ ಶೆಟ್ಟಿ, ಸುಭಾಸ್ ರೈ ಕರ್ನೂರ್ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂದಾರ್ತಿ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಶಿವದೂತ ಪಂಜುರ್ಲಿ’ ಯಕ್ಷಗಾನ ಪ್ರದರ್ಶನ ಜರಗಿತು.