ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ 2024’ ಕಾರ್ಯಕ್ರಮವು ದಿನಾಂಕ 26-05-2024ರಂದು ಅಡ್ಯಾರ್‌ನ ಅಡ್ಯಾರ್ ಗಾರ್ಡನ್‌ನಲ್ಲಿ ಜರುಗಲಿದೆ.
ಬೆಳಗ್ಗೆ ಗಂಟೆ 7.45ಕ್ಕೆ ಚೌಕಿ ಪೂಜೆ – ಅಬ್ಬರ ತಾಳ, ಬಳಿಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಮಹಿಳಾ ಘಟಕದ ಸದಸ್ಯೆಯರಿಂದ ಯಕ್ಷಗಾನ ನಡೆಯಲಿದೆ. 9-00 ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ವೆಂಕಟ್ರಮಣ ಆಸ್ರಣ್ಣ ಆರ್ಶೀರ್ವಚನ ನೀಡಲಿದ್ದಾರೆ. ಟ್ರಸ್ಟ್ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಶುಭಾಶಂಸನೆಗೈಯಲಿರುವರು. 11-00 ಗಂಟೆಗೆ ಯುವ ಭಾಗವತರಿಂದ ‘ಗಾನ ವೈಭವ’ ನಡೆಯಲಿದೆ.
ಮಧ್ಯಾಹ್ನ 1-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದು, ಉದ್ಯಮಿ ಶಶಿಧರ್ ಬಿ. ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ರಾಜೇಶ್ ಪ್ರಸಾದ್, ಉದ್ಯಮಿಗಳಾದ ಕೆ.ಡಿ. ಶೆಟ್ಟಿ, ಕೆ.ಎಂ. ಶೆಟ್ಟಿ ಮಧ್ಯಗುತ್ತು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಯಕ್ಷಧ್ರುವದ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 3-30ಕ್ಕೆ ಪಾರಂಪರಿಕ ಯಕ್ಷಗಾನ ‘ಕಿರಾತಾರ್ಜುನ’ ಪ್ರದರ್ಶನಗೊಳ್ಳಲಿದೆ.
ಸಂಜೆ ಗಂಟೆ 5.15ಕ್ಕೆ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ಯಾನ ಸದಾಶಿವ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 7-30ಕ್ಕೆ ಪ್ರಸಿದ್ಧ ಹಾಸ್ಯ ಕಲಾವಿದರಿಂದ ‘ಯಕ್ಷಗಾನ ಹಾಸ್ಯ ವೈಭವ’ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಸಾಲಿನ ‘ಯಕ್ಷಧ್ರುವ ಪಟ್ಲ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. 2024ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಸಿಎ ದಿವಾಕರ್ ರಾವ್ ಮತ್ತು ಶೈಲಾ ದಿವಾಕರ್ ಪಡೆಯಲಿದ್ದಾರೆ. 18 ಮಂದಿ ಕಲಾವಿದರು ಕಲಾ ಗೌರವವನ್ನು ಸ್ವೀಕರಿಸಲಿದ್ದಾರೆ.
3,500 ಕಲಾವಿದರಿಗೆ (ಯಕ್ಷಗಾನ, ನಾಟಕ –ರಂಗಭೂಮಿ, ದೈವಾರಾಧನೆ) ಉಚಿತ ಅಪಘಾತ ವಿಮಾ ಯೋಜನೆ, 20 ಸಾವಿರ ನಗದಿನೊಂದಿಗೆ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಗೆ ಯಕ್ಷಧ್ರುವ ಕಲಾ ಗೌರವ. ವೈದ್ಯಕೀಯ, ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ, ಆಶಕ್ತರಿಗೆ ಧನಸಹಾಯ, ಗೃಹ ನಿರ್ಮಾಣಕ್ಕೆ ಸಹಾಯ ಧನ, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆ ನಡೆಯಲಿದೆ.