ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಯಕ್ಷಧ್ರುವ ಪಟ್ಲ ಸಂಭ್ರಮ-2023 ಕಾರ್ಯಕ್ರಮದ ಅಂಗವಾಗಿ ಅಡ್ಯಾರ್ ಗಾರ್ಡನ್‌ನಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆಯು ದಿನಾಂಕ 27-05-2023ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ್ ಜೋಷಿ “ಯಕ್ಷಗಾನದಲ್ಲಿ ಎಲ್ಲರೂ ಗೆಲ್ಲುವವರೇ ಇಲ್ಲಿ ಸೋಲುವವರು ಯಾರು ಇಲ್ಲ. ಸ್ಪರ್ಧೆಗಳಲ್ಲಿ ಗೆಲ್ಲುವ ಜತೆಗೆ ನಮ್ಮ ಸಂಸ್ಕೃತಿಯನ್ನು ಪಸರಿಸುವ, ಸಂಸ್ಕಾರವನ್ನು ಉಳಿಸುವ ಕೆಲಸವಾಗುತ್ತದೆ ಎಂಬುದು ಖುಷಿಯ ವಿಚಾರ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನಲ್ಲಿ ನಾನು ಒಂದು ಭಾಗ ಎಂದು ಹೆಮ್ಮೆಯಿದೆ. ಹೆಸರಿಗೆ ತಕ್ಕಂತೆ ಇಲ್ಲಿ ಸಂಭ್ರಮವೇ ನಡೆಯುತ್ತಿದೆ. ಮಹಿಳೆಯರು ಮತ್ತು ಪುರುಷರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಭಾಗವಹಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, “ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಬರುವಂತೆ ಉತ್ತೇಜನ ನೀಡಬೇಕು, ಪಾರಂಪರಿಕ ಸೊಗಡನ್ನು ಉಳಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ” ಎಂದರು.
ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಹೇಶ್ ಮೋಟಾರ್ಸ್ ಮಾಲೀಕ ಜಯರಾಮ ಶೇಖ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಬಹರೈನ್ ಸೌದಿ ಘಟಕದ ಅಧ್ಯಕ್ಷ ರಾಜೇಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಕುಂಬಳೆ ಸುಂದರ ರಾವ್ ವೇದಿಕೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ಹಾಗೂ ಡಾ. ಪುತ್ತೂರು ಶ್ರೀಧರ ಭಂಡಾರಿ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಬಯಲಾಟ ಸ್ಪರ್ಧೆ ನಡೆಯಿತು.
ಪಟ್ಲ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯ ಫಲಿತಾಂಶ
ಪಟ್ಲ ಸಂಭ್ರಮ-2023 ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಎರಡು ದಿನಗಳ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯಲ್ಲಿ ಒಟ್ಟು 34 ತಂಡಗಳು ಭಾಗವಹಿಸಿದ್ದವು. ಸ್ಪರ್ಧಾ ಅವಧಿ 45 ನಿಮಿಷಗಳಾಗಿದ್ದು ಪ್ರತಿ ತಂಡದಲ್ಲಿ ಕನಿಷ್ಠ 10 ಮಂದಿ ಕಲಾವಿದರು ವೇಷಧಾರಿಗಳಾಗಿ ಪಾಲ್ಗೊಳ್ಳುವ ನಿಯಮವಿತ್ತು. ಹೈಸ್ಕೂಲ್ ವಿಭಾಗದಲ್ಲಿ 12 ತಂಡ ಹಾಗೂ ಕಾಲೇಜು ವಿಭಾಗದಲ್ಲಿ 22 ತಂಡ ಒಟ್ಟು 34 ತಂಡಗಳ 612 ಕಲಾವಿದರು ಭಾಗವಹಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಹೊರಗಿನವರನ್ನು ಬಳಸಿಕೊಳ್ಳಲು ಅವಕಾಶ ಇದ್ದರೂ ಹಲವು ಶಾಲೆ ಕಾಲೇಜುಗಳ ತಂಡದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಿಮ್ಮೇಳದಲ್ಲಿದ್ದು ಗಮನಸೆಳೆದಿದ್ದಾರೆ. ಹಿಮ್ಮೇಳದವರಿಗೆ ಒಂದು ವಿಭಾಗದಲ್ಲಿ ಒಂದೇ ತಂಡದಲ್ಲಿ ಭಾಗವಹಿಸಬೇಕು ಎನ್ನುವ ನಿಯಮವಿದ್ದುದರಿಂದ 25ಕ್ಕೂ ಹೆಚ್ಚು ಭಾಗವತರು, ಅರುವತಕ್ಕೂ ಹೆಚ್ಚು ಚೆಂಡೆ ಮದ್ದಳೆ ವಾದಕರು ಭಾಗವಹಿಸಿದ್ದು ಶ್ಲಾಘನೀಯ.
ಕುಂಬ್ಳೆ ಸುಂದರ ರಾವ್ ವೇದಿಕೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದವ ವಿವರ
ಸಮಗ್ರ ತಂಡ
ಪ್ರಥಮ : ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಮೂಡಬಿದ್ರೆ (ಶ್ರೀಹರಿ ಲೀಲಾ),
ದ್ವಿತೀಯ : ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಬಿಜೈ (ತರಣಿಸೇನ) ನಿರ್ದೇಶನ – ರಾಕೇಶ್ ರೈ ಅಡ್ಕ,
ತೃತೀಯ : ಶ್ರೀರಾಮ ವಿದ್ಯಾ ಸಂಸ್ಥೆ, ಫರಂಗಿಪೇಟೆ (ಮೋಕ್ಷ ಸಂಗ್ರಾಮ) ನಿರ್ದೇಶನ – ರಕ್ಷಿತ್ ಶೆಟ್ಟಿ ಪಡ್ರೆ
ಶಿಸ್ತಿನ ತಂಡ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆ, ಉಜಿರೆ (ರತಿ ಕಲ್ಯಾಣ) ನಿರ್ದೇಶನ – ಅರುಣ್ ಕುಮಾರ್ ಧರ್ಮಸ್ಥಳ.
ಪುಂಡು ವೇಷ : ಪ್ರಥಮ – ತರಣಿಸೇನ ಪ್ರಸಂಗದಲ್ಲಿ ತರಣಿಸೇನನ ಪಾತ್ರದ ಚಮನ್ ಎನ್.ಎಸ್. – ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ, ದ್ವಿತೀಯ – ಶ್ರೀಹರಿ ಲೀಲಾ ಪ್ರಸಂಗದಲ್ಲಿ ಸುದರ್ಶನ ಪಾತ್ರ ನಿರ್ವಹಿಸಿದ ಗೌತಮ್ – ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
ಸ್ತ್ರೀ ವೇಷ : ಪ್ರಥಮ- ಮೋಕ್ಷ ಸಂಗ್ರಾಮದಲ್ಲಿ ಸರಮೆ ಪಾತ್ರಧಾರಿ ಚಂದನ – ಶ್ರೀರಾಮ ವಿದ್ಯಾಸಂಸ್ಥೆ ಫರಂಗಿಪೇಟೆ, ದ್ವಿತೀಯ- ಶ್ರೀಹರಿ ಲೀಲಾದಲ್ಲಿ ಲಕ್ಷ್ಮಿ ಪಾತ್ರಧಾರಿ ಅಭಿಜ್ಞಾ – ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡಬಿದ್ರೆ
ರಾಜ ವೇಷ : ಪ್ರಥಮ – ರತಿಕಲ್ಯಾಣದಲ್ಲಿ ಕೌಂಡ್ಲಿಕ ಪಾತ್ರಧಾರಿ ಆದಿತ್ಯ ಹೊಳ್ಳ – ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್ ಉಜಿರೆ, ದ್ವಿತೀಯ – ಬಭ್ರುವಾಹನದ ಅರ್ಜುನ ಪಾತ್ರಧಾರಿ ಮೇಘನಾ – ಶ್ರೀ ಗುರುದೇವ ಆಂಗ್ಲಮಾಧ್ಯಮ ಶಾಲೆ, ಒಡಿಯೂರು
ಬಣ್ಣದ ವೇಷ : ಪ್ರಥಮ – ಶ್ರೀಹರಿ ಲೀಲಾದಲ್ಲಿ ಶತ್ರುಪ್ರಸೂಧನ ಪಾತ್ರಧಾರಿ ಆಯುಷ್ – ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೂಡಬಿದ್ರೆ, ದ್ವಿತೀಯ – ಮೋಕ್ಷ ಸಂಗ್ರಾಮದಲ್ಲಿ ರಾವಣ ಪಾತ್ರಧಾರಿ ದೀಕ್ಷಿತ್ -ಶ್ರೀರಾಮ ವಿದ್ಯಾಸಂಸ್ಥೆ, ಫರಂಗಿಪೇಟೆ
ಹಾಸ್ಯ ವೇಷ : ಪ್ರಥಮ – ಮೋಕ್ಷ ಸಂಗ್ರಾಮದಲ್ಲಿ ರಾವಣದೂತ ಪಾತ್ರಧಾರಿ ರಶ್ಮಿತಾ – ಶ್ರೀರಾಮ ವಿದ್ಯಾಸಂಸ್ಥೆ ಫರಂಗಿಪೇಟೆ, ದ್ವಿತೀಯ – ಶ್ರೀಹರಿ ಲೀಲಾದಲ್ಲಿ ದೇವದೂತ ಪಾತ್ರಧಾರಿ ಮಂಥನ್ – ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡಬಿದ್ರೆ
ಪೋಷಕ ವೇಷ : ಪ್ರಥಮ – ಮೋಕ್ಷ ಸಂಗ್ರಾಮದಲ್ಲಿ ವಿಭೀಷಣ ಪಾತ್ರಧಾರಿ ಪ್ರಗತಿ – ಶ್ರೀರಾಮ ವಿದ್ಯಾಸಂಸ್ಥೆ ಫರಂಗಿಪೇಟೆ, ದ್ವಿತೀಯ – ಶ್ರೀಹರಿ ಲೀಲಾದಲ್ಲಿ ವಿಷ್ಣು ಪಾತ್ರಧಾರಿ ಸಂಶ್ರಿತ್ – ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡಬಿದ್ರೆ
ತಂಡದ ಶ್ರೇಷ್ಠ ಕಲಾವಿದ : ಬ್ರಾಹ್ಮೀ ಮಯ್ಯ (ಕೃಷ್ಣ), ಶ್ರೀಜ ಎಸ್.ಎ. (ಮಾರ್ತಾಂಡತೇಜ), ಪ್ರೀತಿ (ಮಾಲಿನಿ), ಕಾರ್ತಿಕ್ (ದೇವೇಂದ್ರ), ಅಭಿಜ್ಞಾ (ಲಕ್ಷ್ಮಿ), ಚಮನ್ ಎನ್.ಎಸ್. (ತರಣಿಸೇನ), ಆದಿತ್ಯ ಹೊಳ್ಳ (ಕೌಂಡ್ಲಿಕ), ಮೇಘನಾ (ಅರ್ಜುನ), ಪ್ರಗತಿ (ವಿಭೀಷಣ), ಎಸ್. ಸಂದೇಶ್ (ಕೃಷ್ಣ), ಉಪಾಶಸನಾ ಪಿ. (ಲಕ್ಷ್ಮಿ), ಪ್ರಖ್ಯಾತ್ (ಬಾಲಕೃಷ್ಣ)
ಹೈಸ್ಕೂಲ್ ವಿಭಾಗದ ತೀರ್ಪುಗಾರರಾಗಿ ವಾಟೆಪಡ್ಪು ವಿಷ್ಣುಶರ್ಮ, ದಿವಿತ್ ಎಸ್. ಕೋಟ್ಯಾನ್, ಪೆರಾಡಿ ಸಹಕರಿಸಿದರು.
ಪುತ್ತೂರು ಶ್ರೀಧರ ಭಂಡಾರಿ ವೇದಿಕೆಯಲ್ಲಿ ನಡೆದ ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದವ ವಿವರ
ಸಮಗ್ರ ತಂಡ ಪ್ರಶಸ್ತಿ
ಪ್ರಥಮ : ಎನ್.ಎಂ.ಎ.ಎಂ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ (ಶರಣ ಸೇವಾರತ್ನ) ನಿರ್ದೇಶನ – ರಕ್ಷಿತ್ ಶೆಟ್ಟಿ ಪಡ್ರೆ,
ದ್ವಿತೀಯ : ಆಳ್ವಾಸ್ ಕಾಲೇಜು ಮೂಡಬಿದ್ರೆ (ನರಶಾರ್ದೂಲ) ನಿರ್ದೇಶನ – ಪ್ರಸಾದ್ ಚೇರ್ಕಾಡಿ, ಆದಿತ್ಯ ಅಂಬಲಪಾಡಿ,
ತೃತೀಯ : ಗೋವಿಂದ ದಾಸ ಕಾಲೇಜು, ಸುರತ್ಕಲ್ (ನರಕಾಸುರ ಮೋಕ್ಷ) ನಿರ್ದೇಶನ – ಶ್ರೀಮತಿ ಪೂರ್ಣಿಮ ಯತೀಶ್ ರೈ.
ಶಿಸ್ತಿನ ತಂಡ : ಕೆನರಾ ಕಾಲೇಜು (ತರಣಿಸೇನ ಕಾಳಗ) ನಿರ್ದೇಶನ – ರಾಕೇಶ್ ರೈ ಅಡ್ಕ.
ಪುಂಡು ವೇಷ : ಪ್ರಥಮ – ಶ್ರೀಹರಿ ಲೀಲಾದಲ್ಲಿ ಸುದರ್ಶನ ಪಾತ್ರಧಾರಿ ಪ್ರಶಾಂತ್ ಐತಾಳ್ – ಎಸ್.ಡಿ.ಎಂ. ಲಾ ಕಾಲೇಜು, ಮಂಗಳೂರು, ದ್ವಿತೀಯ – ಶರಣ ಸೇವಾರತ್ನದಲ್ಲಿ ತರಣಿಸೇನ ಪಾತ್ರಧಾರಿ ವರುಣ್ ಆಚಾರ್ಯ – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ.
ಸ್ತ್ರೀ ವೇಷ : ಪ್ರಥಮ – ನರಶಾರ್ದೂಲದಲ್ಲಿ ಯಕ್ಷಿ ತಾಟಕಿ ಪಾತ್ರಧಾರಿ ಈಶ್ವರಿ ಆರ್. ಶೆಟ್ಟಿ – ಆಳ್ವಾಸ್ ಕಾಲೇಜು, ಮೂಡಬಿದ್ರೆ, ದ್ವಿತೀಯ – ದಕ್ಷಯಜ್ಞದಲ್ಲಿ ದಾಕ್ಷಾಯಿಣಿ ಪಾತ್ರಧಾರಿ ಪುನೀತ್ – ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು.
ರಾಜ ವೇಷ : ಪ್ರಥಮ – ಶರಣ ಸೇವಾರತ್ನದಲ್ಲಿ ಶ್ರೀರಾಮ ಪಾತ್ರಧಾರಿ ಅನ್ವೇಶ್ ಆರ್. ಶೆಟ್ಟಿ – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ, ದ್ವಿತೀಯ – ನರಶಾರ್ದೂಲದಲ್ಲಿ ಸುಂದಾಸುರ ಪಾತ್ರಧಾರಿ ಪ್ರಜ್ವಲ್ ಶೆಟ್ಟಿ – ಆಳ್ವಾಸ್ ಕಾಲೇಜು ಮೂಡಬಿದ್ರೆ.
ಬಣ್ಣದ ವೇಷ : ಪ್ರಥಮ – ನರಕಾಸುರ ಮೋಕ್ಷದಲ್ಲಿ ನರಕಾಸುರ ಪಾತ್ರಧಾರಿ ವೈಶಾಖ್ – ಗೋವಿಂದ ದಾಸ ಕಾಲೇಜು ಸುರತ್ಕಲ್, ದ್ವಿತೀಯ – ನರಶಾರ್ದೂಲದಲ್ಲಿ ತಾಟಕಿ ಪಾತ್ರಧಾರಿ ಜೀವನ್ ಶೆಟ್ಟಿ – ಆಳ್ವಾಸ್ ಕಾಲೇಜು, ಮೂಡಬಿದ್ರೆ.
ಹಾಸ್ಯ ವೇಷ : ಪ್ರಥಮ – ಶರಣ ಸೇವಾರತ್ನದಲ್ಲಿ ಪಾತ್ರಧಾರಿ ರಾವಣದೂತ ಪ್ರಣವ್ ಮೂಡಿತ್ತಾಯ – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ, ದ್ವಿತೀಯ – ನರಶಾರ್ದೂಲದಲ್ಲಿ ಭಲ್ಲೂಕ ಪಾತ್ರಧಾರಿ ಸತ್ಯಜಿತ್ ರಾವ್ – ಆಳ್ವಾಸ್ ಕಾಲೇಜು ಮೂಡಬಿದ್ರೆ.
ಪೋಷಕ ವೇಷ : ಪ್ರಥಮ – ಶರಣ ಸೇವಾರತ್ನದಲ್ಲಿ ವಿಭೀಷಣ ಪಾತ್ರಧಾರಿ ಟಿ.ಎಂ. ಶ್ರವಣ್ – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ, ದ್ವಿತೀಯ – ಕುಮಾರ ವಿಜಯದಲ್ಲಿ ಘೋರ ಅಜಮುಖಿ ಪಾತ್ರಧಾರಿ ಸುಶ್ಮಿತಾ – ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಬೆಟ್ಟು, ಕಾರ್ಕಳ
ತಂಡದ ಶ್ರೇಷ್ಠ ಕಲಾವಿದ : ತರಣಿಸೇನಾ ಕಾಳಗದಲ್ಲಿ ರಾವಣ ಪಾತ್ರಧಾರಿ ವಿದ್ಯಾಭೂಷಣ್ ಪಿ., ಕುಮಾರ ವಿಜಯದಲ್ಲಿ ದೇವೇಂದ್ರ ಪಾತ್ರಧಾರಿ ಪರೀಕ್ಷಿತ ಗೋಖಲೆ, ಏಕಾದಶೀ ದೇವಿ ಮಹಾತ್ಮೆಯಲ್ಲಿ ವಿಷ್ಣು ಪಾತ್ರಧಾರಿ ವರ್ಷಾ ಲಕ್ಷ್ಮಣ, ಶಾಂಭವಿ ವಿಜಯದಲ್ಲಿ ಕೌಶಿಕೆ ಪಾತ್ರಧಾರಿ ಕೃತಿಕಾ, ದಕ್ಷಯಜ್ಞದಲ್ಲಿ ದಾಕ್ಷಾಯಿಣಿ ಪಾತ್ರಧಾರಿ ಪುನೀತ್, ಸುದಕ್ಷಿಣ ವಧೆಯಲ್ಲಿ ಅಭಿಚಾರ ಕೃತಿ ಪಾತ್ರಧಾರಿ ಕ್ಷಿತಿಜ್, ವೀರ ಬಭ್ರುವಾಹನದಲ್ಲಿ ಬಭ್ರುವಾಹನ ಪಾತ್ರಧಾರಿ ನಿರೀಕ್ಷಾ, ಸುದರ್ಶನ ವಿಜಯದಲ್ಲಿ ವಿಷ್ಣು ಪಾತ್ರಧಾರಿ ಅನನ್ಯ, ಗದಾಯುದ್ಧದಲ್ಲಿ ಕೌರವ ಪಾತ್ರಧಾರಿ ಮೈತ್ರಿ ಭಟ್, ಶರಣ ಸೇವಾರತ್ನದಲ್ಲಿ ತರಣಿಸೇನ ಪಾತ್ರಧಾರಿ ವರುಣ್ ಆಚಾರ್ಯ, ದಕ್ಷಯಜ್ಞದಲ್ಲಿ ದಾಕ್ಷಾಯಿಣಿ ಪಾತ್ರಧಾರಿ ಭುವನ್ ಶೆಟ್ಟಿ, ಭಾರ್ಗವ ವಿಜಯದಲ್ಲಿ ಕಾರ್ತವೀರ್ಯ ಪಾತ್ರಧಾರಿ ಚಿನ್ಮಯ ಕೃಷ್ಣ ಕೆ., ಮೋಕ್ಷ ಮೋಹರದಲ್ಲಿ ತರಣಿಸೇನ ಪಾತ್ರಧಾರಿ ಲೋಹಿತ್ ಕಟೀಲ್.
ಕಾಲೇಜು ವಿಭಾಗದ ತೀರ್ಪುಗಾರರಾಗಿ ಉಬರಡ್ಕ ಉಮೇಶ್ ಶೆಟ್ಟಿ, ಗೋಣಿಬೀಡು ಸಂಜಯ ಕುಮಾರ್ ಶೆಟ್ಟಿ, ಕೃಷ್ಣ ಪ್ರಕಾಶ್ ಉಳಿತ್ತಾಯ ಸಹಕರಿಸಿದರು. ಸ್ಪರ್ಧೆಯ ಪ್ರಧಾನ ಸಂಚಾಲಕರಾಗಿ ಕದ್ರಿ ನವನೀತ ಶೆಟ್ಟಿ, ಸಂಚಾಲಕರರಾಗಿ ಕೃಷ್ಣ ಶೆಟ್ಟಿ ತಾರೆಮಾರ್, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ನಿರೂಪಕರಾಗಿ ನಿತೇಶ್ ಶೆಟ್ಟಿ ಎಕ್ಕಾರು, ರಾಜೇಂದ್ರ ಎಕ್ಕಾರು, ಡಾ. ಪ್ರಿಯಾ ಹರೀಶ್, ಬಿಂದಿಯಾ ಶೆಟ್ಟಿ, ಪ್ರಕಾಶ್ ಮೇಲಾಂಟ, ಶೋಭಾ ಐತಾಳ್ ಸಹಕರಿಸಿದರು.
ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಅನುಕ್ರಮವಾಗಿ ರೂ.50,೦೦೦/-, ರೂ.30,೦೦೦/- ಮತ್ತು
ರೂ.20,೦೦೦/- ನೀಡಲಾಗಿದ್ದು, ಉಳಿದ ಎಲ್ಲಾ ತಂಡಗಳಿಗೆ ರೂ.10,೦೦೦/- ಗೌರವಧನ ನೀಡಲಾಗಿದೆ. ವೈಯಕ್ತಿಕ ವಿಭಾಗ ವಿಜೇತರಿಗೆ ಪ್ರಥಮ ರೂ.5,೦೦೦/-, ದ್ವಿತೀಯ ರೂ.3,೦೦೦/- ಹಾಗೂ ತಂಡಗಳ ಶ್ರೇಷ್ಠ ಕಲಾವಿದರಿಗೆ ತಲಾ ರೂ.2,೦೦೦/- ದೊಂದಿಗೆ ಪ್ರಶಂಸಾ ಪತ್ರ, ಶಾಶ್ವತ ಫಲಕ, ಪದಕಗಳನ್ನು ನೀಡಲಾಯಿತು.
ಸಮಯಪ್ರಜ್ಞೆಯೊಂದಿಗೆ ಶಿಸ್ತುಬದ್ಧವಾಗಿ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಎಲ್ಲರನ್ನೂ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಶ್ರೀ ಸತೀಶ್ ಶೆಟ್ಟಿ ಪಟ್ಲ ಅಭಿನಂದಿಸಿದ್ದಾರೆ.