ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮವು ದಿನಾಂಕ 30 ಜೂನ್ 2025ರಂದು ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟಿನ ಪುತ್ತೂರು ತಾಲೂಕು ಸಂಚಾಲಕ ಪ್ರಶಾಂತ ರೈ, ಸುಳ್ಯ ತಾಲೂಕು ಅಧ್ಯಕ್ಷ ಪ್ರೀತಂ ರೈ, ಯಕ್ಷಗಾನ ಗುರು ಯೋಗೀಶ್ ಶರ್ಮ, ಭಜನಾ ಪರಿಷತ್ ಅಜ್ಜಾವರ ವಲಯ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತ ಪಾತಿಕಲ್ಲು, ಗ್ರಾಮ ಪಂಚಾಯತ್ ಸದಸ್ಯೆ, ಪ್ರಶಾಂತಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳ ಅತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಕುಮಾರಿ ಸ್ವಾಗತಿಸಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟಿನ ಪುತ್ತೂರು ತಾಲೂಕು ಸಂಚಾಲಕ ಪ್ರಶಾಂತ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಮಂಜುಳ ಅತ್ಯಾಡಿ ವಂದಿಸಿ, ದಿವ್ಯ ಹಾಗೂ ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ತರಬೇತಿ ಕಾರ್ಯಕ್ರಮ ಆರಂಭಗೊಂಡಿತ್ತು.