ಬಂಟ್ವಾಳ : ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ ದಿನಾಂಕ 25 ಜನವರಿ 2025ರಂದು ನಿಧನ ಹೊಂದಿದರು. ಇವರಿಗೆ 84ವರ್ಷ ವಯಸ್ಸಾಗಿತ್ತು.
ವೃತ್ತಿಯಲ್ಲಿ ಅಧ್ಯಾಪಕರಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ,ಹವ್ಯಾಸಿ ವೇಷಧಾರಿಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ನಿವೃತ್ತಿಯ ಅನಂತರ ವಾಸುದೇವ ಸಾಮಗರ ‘ಸಂಯಮಂ’ ತಂಡದಲ್ಲಿ ಕೆಲವು ವರ್ಷ ತಿರುಗಾಟ ಮಾಡಿದ್ದ ಇವರು ಅಪಾರ ಪುರಾಣ ಜ್ಞಾನ, ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು.
ಕೈರಂಗಳ ಯಕ್ಷಗಾನ ಸಂಘದ ಆಟದಲ್ಲಿ ಮೊತ್ತಮೊದಲು ನಾರದನಾಗಿ ರಂಗವೇರಿದ ಇವರು ಹೆಜ್ಜೆಗಾರಿಕೆ ಅಭ್ಯಸಿಸದಿದ್ದರೂ ‘ಹಿರಣ್ಯಕಶ್ಯಪ’, ‘ಮಯೂರ ಧ್ವಜ’ ಮುಂತಾದ ಪಾತ್ರಗಳನ್ನು ನಿರ್ವಹಿಸಿದರು.
1999ನೇ ಇಸವಿ ತನ್ನ 58ನೇ ವಯಸ್ಸಿನಲ್ಲಿ ವೃತ್ತಿ ಜೀವನದಿಂದ (ಅಧ್ಯಾಪಕ) ನಿವೃತ್ತರಾಗಿದ್ದರೂ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ‘ಶೇಣಿ ಪ್ರಶಸ್ತಿ’, ‘ದೇರಾಜೆ ಪ್ರಶಸ್ತಿ’, ‘ಪುತ್ತೂರು ಯಕ್ಷಾಂಜನೇಯ ಪ್ರಶಸ್ತಿ’, ‘ಪೆರ್ಲ ಕೃಷ್ಣಭಟ್ ಪ್ರಶಸ್ತಿ’ ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಬರೆ ಕೇಶವ ಭಟ್ಟರನ್ನು ಗುರುತಿಸಿ ಗೌರವಿಸಿವೆ. ಬಂಟ್ವಾಳ ತಾಲೂಕು ಇರಾ ಗ್ರಾಮದ ಸಣ್ಣಯಬೈಲು ಎಂಬಲ್ಲಿ ವಾಸವಾಗಿದ್ದ ಇವರು ಪತ್ನಿ ದುರ್ಗಾಪರಮೇಶ್ವರೀ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.