ಮಂಗಳೂರು : ವೇಷ ಕಳಚುತ್ತಿರುವಾಗಲೇ ಹೃದಯಾಘಾತವಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಖ್ಯಾತ ಕಲಾವಿದ ಗಂಗಾಧರ ಪುತ್ತೂರು (60) ಅವರು ಇಹಲೋಕ ತ್ಯಜಿಸಿದ್ದಾರೆ.
ದಿನಾಂಕ 01-05-2024ರ ಬುಧವಾರ ರಾತ್ರಿ ಕೋಟದ ಗಾಂಧಿ ಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣ ತೆಗೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ.
ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಶ್ರೀಯುತರು 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ್ದರು. ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.