ಉಡುಪಿ : ಮಾಹೆ, ಯಕ್ಷಗಾನ ಕೇಂದ್ರ ಇಂದ್ರಾಳಿ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ “ಬಡಗುತಿಟ್ಟು ಯಕ್ಷಗಾನ ಭಾಗವತಿಕೆಯ ವಿವಿಧ ಶೈಲಿ-ಮಟ್ಟುಗಳ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಕಾರ್ಯಕ್ರಮವು ದಿನಾಂಕ 07-04-2024ರ ರವಿವಾರದಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಕಲೆಯ ಉಳಿವಿಗಾಗಿ ಯುವ ಸಮುದಾಯದ ಒಳಗೊಳ್ಳುವಿಕೆ ಪ್ರಮುಖವಾಗಿದ್ದು, ಮುಂದಿನ ಪೀಳಿಗೆಗೂ ಉತ್ತಮ ಭಾಗವತರು ರೂಪುಗೊಳ್ಳಬೇಕು. ಯಕ್ಷಗಾನಕಲಾಪ್ರಕಾರದಲ್ಲಿ ಭಾಗವತಿಕೆ ಕಲೆಯೂ ಮಹತ್ವದ ಭಾಗವಾಗಿದ್ದು, ಯುವ ಜನರಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದಲ್ಲಿ ಉತ್ತಮ ಗಮನ ಸೆಳೆಯುವ ಶಾಸ್ತ್ರೀಯ ಭಾಗವತರನ್ನು ಸಿದ್ಧಪಡಿಸಬೇಕಿದೆ.” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ್ ಕಾರಂತ್ ಮತ್ತು ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಾನಂದ ಪೈ ಮಾತನಾಡಿ “ಯಕ್ಷಗಾನ ಭಾಗವತಿಕೆಯ ವಿವಿಧ ಶೈಲಿ ಹಾಗೂ ಮಟ್ಟುಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಪ್ರಶಂಸನೀಯ.” ಎಂದರು.
ಯಕ್ಷಗಾನ ಗುರು, ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗ, ಯಕ್ಷಗಾನ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರೋ. ಎಸ್. ವಿ. ಉದಯ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕರಾದ ರಾಘವೇಂದ್ರ ತುಂಗ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವತರಾದ ವಿಷ್ಣು ಸುಬ್ರಾಯ ಹೆಗಡೆ ಹಿರೇಮಕ್ಕಿ, ಹಿರಿಯಣ್ಣ ಆಚಾರ್ಯ ಕಿಗ್ಗ, ಉದಯ ಕುಮಾರ್ ಹೊಸಾಳ, ನಾಗೇಶ್ ಕುಲಾಲ್ ನಾಗರಕೋಡಿಗೆ, ಮರವಂತೆ ಕೃಷ್ಣವಾಸ್, ಮದ್ದಳೆಯಲ್ಲಿ ಮಹೇಶ್ ಕುಮಾರ್ ಮಂದಾರ್ತಿ, ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಚಂಡೆಯಲ್ಲಿ ಶ್ರೀಕಾಂತ ಶೆಟ್ಟಿ ಎಡಮೊಗೆ ಭಾಗವಹಿಸಿದರು.