ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ’ ಸರಣಿಯ 8ನೇ ಕಾರ್ಯಕ್ರಮ ದಿನಾಂಕ 05 ಆಗಸ್ಟ್ 2025ರ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವವನ್ನು ಹಂಚಿಕೊಂಡ ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ರಾಮಕೃಷ್ಣ ರಾವ್ ರೆಂಜಾಳ “ಕಲಿತು ಮುಗಿಯದ ಕಲೆ ಯಕ್ಷಗಾನ. ಪರಿಶ್ರಮ, ಪ್ರಯತ್ನ, ಆಸಕ್ತಿ ಇದ್ದರೆ ಮಾತ್ರ ಈ ಕಲೆ ಒಲಿದು ಬರುತ್ತದೆ. ಕಲಾವಿದರಿಗೂ ಪರಂಪರೆಯ ಒಲವು, ಕಾಲ ಜ್ಞಾನ ಮತ್ತು ತಿಟ್ಟಿನ ಶಿಸ್ತು ಬೇಕು. ಬೆರಕೆ ಬೇಡ. ಯಕ್ಷಗಾನ ಕಲೆಯು ಪರಂಪರೆ ಹಾಗೂ ಚೌಕಟ್ಟನ್ನು ಮೀರದೆ ಕಲೆಯ ಮೌಲ್ಯವನ್ನು ಉಳಿಸಿಕೊಂಡು ಬೆಳೆಯಬೇಕು. ನಾಟಕೀಯತೆ ಹೆಚ್ಚಾಗಿ ಯಕ್ಷಗಾನ ಎಂದಿಗೂ ನಾಟಕ ಸಭಾ ಆಗದಿರಲಿ. ಕಾಲಮಿತಿ ಬಂದನಂತರ ಹೊಸತನದೊಂದಿಗೆ ಪರಂಪರೆಯ ವೇಷಗಳು ಮರೆಯಾಗುತ್ತಿವೆ. ಈಗಿನ ಕಲಾವಿದರಿಗೆ ಮೇಳ ತಿರುಗಾಟ ಕಷ್ಟ ಇಲ್ಲ. ಆಗ ಮೂರು ರೂಪಾಯಿ ಸಂಬಳ ಸಿಗುತ್ತಿದ್ದ ಕಾಲದಲ್ಲೂ ತೃಪ್ತಿ, ನೆಮ್ಮದಿ ಇತ್ತು. ಆದರೆ ಅವಕಾಶಗಳು ಇದ್ದರೂ ಈಗ ನೆಮ್ಮದಿ ಇಲ್ಲ. ಕಾಲಮಿತಿಯ ಪರಿಣಾಮ ರಾತ್ರಿ ಕಲಾವಿದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಯಕ್ಷಗಾನವನ್ನು ನೋಡಿ ಕಲಿತವನೇ ನಾನು. ಅಗರಿ ಭಾಗವತರು ಕೂಡ್ಲು ಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಹಿರಿಯ ಕಲಾವಿದರ ಒಡನಾಟದೊಂದಿಗೆ ಬೆಳೆದಿದ್ದೇನೆ.
ಸ್ತ್ರೀವೇಷವನ್ನೇ ಹೆಚ್ಚಾಗಿ ಮಾಡುತ್ತಿದ್ದ ನಾನು ಕೆಲಮೊಮ್ಮೆ ಕೇಸರಿ ತಟ್ಟೆ ಪಾತ್ರವನ್ನೂ ಮಾಡಿದ್ದೇನೆ. ಅರ್ಜುನ, ಹಿರಣ್ಯಾಕ್ಷ, ದೇವೇಂದ್ರ ಸೇರಿದಂತೆ ಪೀಠಿಕೆ ವೇಷಗಳನ್ನು ಮಾಡಿದ್ದೇನೆ. ಈಗಿನವರು ಒಂದೆರಡು ವೇಷ ಮಾಡಲು ಹಿಂದೇಟು ಹಾಕುತ್ತಾರೆ ನಾನು ಒಂದೇ ರಾತ್ರಿ ಆರು ಪಾತ್ರಗಳನ್ನೂ ಮಾಡಿದ್ದೂ ಇದೆ. ಎಲ್ಲಾ ಪಾತ್ರಗಳನ್ನು ಸಂತೋಷದಿಂದ ಅನುಭವಿಸಿ ಮಾಡುತ್ತಿದ್ದೆವು” ಎಂದರು.
ಯಕ್ಷಾಯಣ ದಾಖಲೀಕರಣ ಸರಣಿ 8 ರ ಕಾರ್ಯಕ್ರಮವನ್ನು ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಮಂಗಳೂರು ವಿ. ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಇವರು ಆರಂಭದಲ್ಲಿ ಕೂಡ್ಲು, ಮಡಿಕೇರಿ ಮೇಳಗಳಲ್ಲಿ ಹಾಗೂ ಬಳಿಕ ಕಟೀಲು ಮೇಳದಲ್ಲಿ ಕಳೆದ ನಾಲ್ಕು ದಶಕಗಳಿಗೂ ಅಧಿಕ ಕಾಲ ಯಕ್ಷಗಾನದಲ್ಲಿ ತೊಡಗಿಸಿಕೊಂಡು,ತೆಂಕುತಿಟ್ಟು ಯಕ್ಷಗಾನ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹಾನ್ ಕಲಾವಿದರಾಗಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಸುಣ್ಣಂಬಳ ಈಶ್ವರ ಭಟ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಸುಬ್ಬ ಪಕ್ಕಳ, ವಿವಿಧ ಪೀಠಗಳ ಸಂಶೋಧನಾ ಸಹಾಯಕರು, ರೆಂಜಾಳ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಚಂದ್ರಶೇಖರ್ ಎಂ. ಬಿ. ದಾಖಲೀಕರಣದಲ್ಲಿ ಸಹಕರಿಸಿದರು.
ಗೆಜ್ಜೆ ಕೊಟ್ಟು ಕಣ್ಣೀರಿಟ್ಟ ರೆಂಜಾಳ :
ನನ್ನಲ್ಲಿ ಯಕ್ಷಗಾನಕ್ಕೆ ಸಂಬಧಿಸಿದ ಅನೇಕ ಮಣಿಸರ, ಕಿರೀಟಗಳಿದ್ದವು ಅವುಗಳನ್ನೆಲ್ಲ ಉಚಿತವಾಗಿ ಆಸಕ್ತಿ ಇದ್ದವರಿಗೆ ಹಂಚಿದೆ. ಆದರೆ ಗೆಜ್ಜೆಯನ್ನು ಯಾರಿಗೂ ಉಚಿತ ಕೊಡ್ಬೇಡಿ ಎಂದು ಗೆಳೆಯ ಕಲಾವಿದ ಹೇಳಿದ್ದಕ್ಕೆ ಅದನ್ನು ಮಾರಿದೆ. ಅವರು ಎಂಟು ರೂಪಾಯಿ ಕೊಟ್ಟರು. ಗೆಜ್ಜೆ ಮಾರಿದ ಕ್ಷಣ ನಾನು ಕಣ್ಣೀರಿಟ್ಟೆ ಎಂದು ರೆಂಜಾಳ ಹೇಳಿದರು.