ಸುರತ್ಕಲ್ : ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ 9ನೇ ವಾರ್ಷಿಕೋತ್ಸವವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ದಿನಾಂಕ 29-01-2024 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಇಡ್ಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ರಮಾನಂದ ಭಟ್ ಮಾತನಾಡಿ “ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯು ಒಳ್ಳೆಯ ಕೆಲಸಗಳನ್ನು ಮಾಡುತಿದ್ದು, ಅದಕ್ಕೆ ನಮ್ಮ ಶ್ರೀ ಕ್ಷೇತ್ರದಿಂದ ಸಂಪೂರ್ಣ ಸಹಕಾರವನ್ನು ಸಂತೋಷದಿಂದ ಕೊಡುತ್ತೇವೆ.”ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಸುರತ್ಕಲ್ ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಭವ್ಯಾ ಶೆಟ್ಟಿ ಅವರು ಮಂಡಳಿಯ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ “ ತಡಂಬೈಲ್ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸಮರ್ಥವಾಗಿ ತಾಳಮದ್ದಳೆ ಕಾರ್ಯಕ್ರಮವನ್ನು ನೀಡಲು ಮಂಡಳಿಯ ನಿರ್ದೇಶಕ ಹಾಗೂ ಗುರುಗಳಾದ ವಾಸುದೇವರಾಯರ ಪರಿಶ್ರಮ ಅಭಿನಂದಾನರ್ಹ”. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತೆಂಕುತಿಟ್ಟು ಮಹಿಳಾ ಯಕ್ಷಗಾನ ರಂಗದ ಅಗ್ರಾಮಾನ್ಯ ಕಲಾವಿದೆ ಹಾಗೂ ಗುರುವಾಗಿ ಅನೇಕ ಶಿಷ್ಯರನ್ನು ರಂಗಕ್ಕೆ ಪರಿಚಯಿಸಿದ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಅವರನ್ನು ಸಮ್ಮಾನಿಸಲಾಯಿತು. ಅಗರಿ ರಾಘವೇಂದ್ರ ರಾವ್ ಅಭಿನಂದನಾ ಭಾಷಣ ನೆರವೇರಿಸಿದರು. ಸಮತಾ ಮಹಿಳಾ ಬಳಗದ ಅಧ್ಯಕ್ಷೆ ವಂದನಾ ಸುರೇಶ್, ಮಂಡಳಿ ನಿರ್ದೇಶಕ ಎಸ್. ವಾಸುದೇವ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಮಂಡಳಿ ಅಧ್ಯಕ್ಷೆ ಸುಲೋಚನಾ ವಿ. ರಾವ್ ಸ್ವಾಗತಿಸಿ, ಸುಮಿತ್ರಾ ಶಶಿಕಾಂತ ಕಲ್ಲೂರಾಯ ನಿರೂಪಿಸಿ, ಮನೋರಮಾ ಉಮೇಶ್ ಸಮ್ಮಾನ ಪತ್ರ ವಾಚಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಂಡಳಿಯ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಳಿಕೆಯಲ್ಲಿ ‘ಸುದರ್ಶನ ವಿಜಯ’ ಪ್ರಸಂಗದ ತಾಳಮದ್ದಳೆ ಪ್ರಸ್ತಗೊಂಡಿತು.
ಹಿಮ್ಮೇಳದಲ್ಲಿ ಉದಯೋನ್ಮುಖ ಭಾಗವತಾರಾದ ಕುಮಾರಿ ಹೇಮಸ್ವಾತಿ ಕೂರ್ಮಾಜೆ, ಚಂಡೆ ಮದ್ದಳೆಯಲ್ಲಿ ಹಿರಿಯ ಕಲಾವಿದ ಪದ್ಯಾಣ ಶ್ರೀ ಶಂಕರ ನಾರಾಯಣ ಭಟ್ ಹಾಗೂ ಪದ್ಯಾಣ ಶ್ರೀ ಜಯರಾಮ ಭಟ್, ಅರ್ಥದಾರಿಗಳಾಗಿ ಸುಲೋಚನ ವಿರಾಟ್, ಸುಮಿತ್ರಾ ಕಲ್ಲೂರಾಯ, ಮನೋರಮ ಉಮೇಶನ್, ಗಾಯತ್ರಿ ಭಾಸ್ಕರ್ ಹಾಗೂ ಕುಮಾರಿ ಪಂಚಮಿ ಕುಬಣೂರಾಯ ಭಾಗವಹಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ 9ನೇ ವರ್ಷದ ಯಕ್ಷಗಾನ ಸಪ್ತಾಹವನ್ನು ದಿನಾಂಕ 30-01-2024 ರಂದು ಪಚ್ಚನಾಡಿಯ ಪ್ರಸಿದ್ಧ ಜ್ಯೋತಿಷಿ ವೇದಮೂರ್ತಿ ಶ್ರೀ ಸೀತಾರಾಮ ಆಚಾರ್ಯ ಮತ್ತು ಶ್ರೀಮತಿ ಸ್ವಾತಿ ಆಚಾರ್ಯ ಉದ್ಘಾಟಿಸಿದರು. ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಕೀಲರಾದ ಕೃಷ್ಣಾಪುರ ಶ್ರೀ ಪಿ. ಸದಾಶಿವ ಐತಾಳರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯದ ಗೌರವಾಧ್ಯಕ್ಷರಾದ ಶ್ರೀ ಪಿ. ಪುರುಷೋತ್ತಮ ರಾವ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಕಾತ್ಯಾಯನಿ ರಾವ್ ಕೆ. ಅತಿಥಿ ಗಳಾಗಿ ಭಾಗವಹಿಸಿದರು.
ಸಭಾಕಾರ್ಯಕ್ರಮದ ಬಳಿಕ ಕವಿ ಅಜಪುರ ವಿಷ್ಣು ಭಾಗವತ ವಿರಚಿತ ‘ಉತ್ತರನ ಪೌರುಷ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ದಯಾನಂದ ಕೊಡಿಕಲ್ ಹಾಗೂ ಚಂಡೆ ಮದ್ದಳೆಯಲ್ಲಿ ರಾಕೇಶ್ ಆರ್ಕುಳ ಮತ್ತು ಶೈವಿನ್ ಶೆಟ್ಟಿಗಾರ್ ಸಹಕರಿಸಿದರೆ, ಮುಮ್ಮೇಳದಲ್ಲಿ ಶ್ರೀಮತಿಯರಾದ ಪದ್ಮಾ ಕೆ. ಆಚಾರ್ಯ ಪುತ್ತೂರು, ಜಯಲಕ್ಷ್ಮೀ ಭಟ್ ಪುತ್ತೂರು, ಪ್ರೇಮಾ ಕಿಶೋರ್ ಪುತ್ತೂರು ಹಾಗೂ ಕುಮಾರಿ ಪಂಚಮಿ ಕುಬಣೂರಾಯ ಮತ್ತು ಕುಮಾರಿ ಶ್ರೀ ರಕ್ಷಾ ಅರ್ಥದಾರಿಗಳಾಗಿ ಭಾಗವಹಿಸಿದರು.