ಸವಣೂರು : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ದಿನಾಂಕ 25 ಮೇ 2025ರಂದು ಸವಣೂರಿನ ಪಿ. ಎಂ. ಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು.
ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು. ರಚನಾ ಚಿದ್ಗಲ್ ಇವರಿಗೆ ‘ಶ್ರವಣಸ್ವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಸಮಾರಂಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ರವಿಚಂದ್ರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಹರ್ಷಗುತ್ತು, ಎಸ್. ಡಿ. ಎಂ. ಸಿ. ಸದಸ್ಯರಾದ ರಮೇಶ್ ಗೌಡ, ಹರೀಶ್, ಆನಂದ ಗುತ್ತು, ಜಯಪ್ರಕಾಶ್, ಯಮುನಾ, ಶಿಕ್ಷಕಿ ಹೇಮಾವತಿ, ಯಕ್ಷಗಾನದ ವಿದ್ಯಾರ್ಥಿಗಳು, ಪೋಷಕರು, ಊರವರು ಪಾಲ್ಗೊಂಡರು.
ಸಭಾ ಕಾರ್ಯಕ್ರಮದ ಬಳಿಕ ‘ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಕು. ರಚನಾ ಹಾಗೂ ಶ್ರೇಯಾ ಇವರು ಭಾಗವಹಿಸಿದರು. ಮದ್ದಳೆಯಲ್ಲಿ ಅಚ್ಯುತ ಪಾಂಗಣ್ಣಾಯ, ಪ್ರವೀಣ ಬಲ್ಯಾಯ, ಚೆಂಡೆಯಲ್ಲಿ ತಾರಾನಾಥ ಸವಣೂರು ಸಹಕರಿಸಿದರು. ಮುಮ್ಮೇಳದಲ್ಲಿ ಜಾಂಬವಂತನಾಗಿ ಗುಂಡ್ಯಡ್ಕ ಈಶ್ವರ ಭಟ್, ಕೃಷ್ಣನಾಗಿ ದಿವಾಕರ ಆಚಾರ್ಯ ಹಳೆನೇರಂಕಿ, ಬಲರಾಮನಾಗಿ ಪ್ರಸಾದ್ ಸವಣೂರು, ನಾರದನಾಗಿ ತಾರಾನಾಥ ಸವಣೂರು ಪಾಲ್ಗೊಂಡರು.
ಶ್ರವಣರಂಗದ ಸಂಚಾಲಕ ತಾರಾನಾಥ ಸವಣೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಶ್ರವಣರಂಗದ ಅಧ್ಯಕ್ಷರಾದ ಆನಂದ ಸವಣೂರು ವಂದಿಸಿದರು.

