ಅಜೆಕಾರು : ಮುಂಬೈಯ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ತಮ್ಮ ಹುಟ್ಟೂರು ಅಜೆಕಾರಿನ ಕಲ್ಕುಡಮಾರ್ ಎಂಬಲ್ಲಿ ನೂತನವಾಗಿ ಕಟ್ಟಿಸಿದ ‘ಶ್ರೀ ಬಾಲಾಜಿ’ ಬಾಲಾಶಯ ನಿಲಯದ ಗೃಹಪ್ರವೇಶದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟ ಹಾಗೂ ಕಲಾವಿದರರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 03-05-2024 ರಂದು ಅಜೆಕಾರಿನ ಕಲ್ಕುಡಮಾರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲು ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಮಾತನಾಡಿ “ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವರೂಪದ ಏಕೈಕ ಕಲೆ ಯಕ್ಷಗಾನ. ಪುರಾಣದ ಸಂದೇಶಗಳನ್ನು ಸರಳ ರೂಪದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಶ್ರೇಷ್ಠ ಕಾರ್ಯ ಯಕ್ಷಗಾನದಿಂದ ಆಗುತ್ತಿದೆ. ಅದೇ ರೀತಿ ತಮ್ಮ ಬದುಕಿನ ಅಶೋತ್ತರಗಳು ಈಡೇರಿದ ಸಂದರ್ಭದಲ್ಲಿ ಹರಕೆ ಬಯಲಾಟಗಳನ್ನು ಆಡಿಸುವ ಸಂಪ್ರದಾಯವೂ ಇಲ್ಲಿ ಬೆಳೆದು ಬಂದಿದೆ.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣರು ಮಾತನಾಡಿ “ಯಕ್ಷಗಾನ ಸೇವೆಯ ಮೂಲಕ ಮಾಡುವ ಕಲಾರಾಧನೆ ಅತ್ಯಂತ ಶ್ರೇಷ್ಠ ಕಾರ್ಯ” ಎಂದರು.
ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ “ಮುಂಬೈಯಲ್ಲಿ ಹುಟ್ಟಿ ಬೆಳೆದ ನೂರಾರು ಮಂದಿ ಸ್ತ್ರೀ ಪುರುಷ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಮಹಾನಗರದಲ್ಲಿ ಅಪಾರ ಯಕ್ಷಾಭಿಮಾನಿಗಳನ್ನು ಬೆಳೆಸಿದ ಅಜೆಕಾರು ಬಾಲಕೃಷ್ಣ ಶೆಟ್ಟರ ಕಲಾ ಸೇವೆ ಅನುಪಮ.” ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಬಯಲಾಟ ರಂಗಸ್ಥಳದ ಮೇಲೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕಲಾ ತ್ರಿವಳಿಗಳನ್ನು ಸನ್ಮಾನಿಸಲಾಯಿತು. ಕಟೀಲು ಮೇಳದ ಭಾಗವತ ದೇವಿ ಪ್ರಸಾದ್ ಆಳ್ವ ತಲಪಾಡಿ, ಮೇಳದ ಪ್ರಬಂಧಕ ಹಾಗೂ ಹಿರಿಯ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ಮತ್ತು ಖ್ಯಾತ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಅವರನ್ನು ಶಾಲು – ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ಗೌರವ ನಿಧಿಯೊಂದಿಗೆ ಗಣ್ಯರು ಸನ್ಮಾನಿಸಿದರು. ಮುಂಬೈ ಚಿನ್ನರ ಬಿಂಬದ ಅಧ್ಯಕ್ಷ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಉದ್ಯಮಿ ಅಜೆಕಾರ್ ವಿಜಯಶೆಟ್ಟಿ ಅತಿಥಿಗಳಾಗಿದ್ದರು.
ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದು, ಆಶಾ ಬಾಲಕೃಷ್ಣ ಶೆಟ್ಟಿ, ಅನಿಷಾ ಮತ್ತು ಅನುಷಾ ಅತಿಥಿಗಳನ್ನು ಗೌರವಿಸಿ, ಕಾರ್ಯಕ್ರಮದ ಸಂಘಟಕ ಮತ್ತು ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕಟೀಲು ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.
ಗೃಹಪ್ರವೇಶದ ಅಂಗವಾಗಿ ದಿನಾಂಕ 04-05-2024 ರಂದು ಗೋಂದೊಳು, ಕೋಲ ಮತ್ತು ಭಜನಾ ಕಾರ್ಯಕ್ರಮ ನೆರವೇರಿತು. ದಿನಾಂಕ 05-04-2024 ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾವ್ಯಶ್ರೀ ಅಜೇರು, ಡಾ. ಪ್ರಖ್ಯಾತ್ ಶೆಟ್ಟಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಅವರ ಹಿಮ್ಮೇಳದಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಹರೀಶ್ ಭಟ್ ಬೊಳಂತಿಮೊಗರು ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು.