ಉಡುಪಿ : ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಇವರು ಯಕ್ಷ ಸಂಜೀವ ಪ್ರತಿಷ್ಠಾನದ ಸಹಕಾರದೊಂದಿಗೆ ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 21 ಮೇ 2025ರಂದು ತಿಂಗಳೆ ಎನ್. ಎಸ್. ಡಿ. ಪ್ರತಿಷ್ಠಾನದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಮಾತನಾಡಿ “ಯಕ್ಷಗಾನವನ್ನು ಯೋಗ್ಯ ಗುರುಗಳಿಂದ ಕಲಿತರೆ ಮುಂದಿನ ಪೀಳಿಗೆಗೆ ಕಲೆಯನ್ನು ಸಮರ್ಪಕವಾಗಿ ದಾಟಿಸಬಹುದಾಗಿದೆ. ಯಕ್ಷಗಾನ ಕಲಿತವರೆಲ್ಲ ಗುರುವಾಗಲು ಸಾಧ್ಯವಿಲ್ಲ. ಸಂಜೀವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಫಲ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ “ಕಲಿಯುವ ತುಡಿತ ಸಾಧನೆಯ ಛಲ ಇವೆರಡೂ ಇದ್ದರೆ ಯಾವುದೂ ಅಸಾಧ್ಯವಲ್ಲ” ಎಂದರು. ತಿಂಗಳೆ ಪ್ರತಿಷ್ಠಾನದ ಪ್ರೊಫೆಸರ್ ವಿವೇಕ್, ಭಾಗವತರಾದ ಲಂಬೋದರ ಹೆಗಡೆ ನಿಟ್ಟೂರು, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.
ಸುಮಾರು 30 ವಿದ್ಯಾರ್ಥಿಗಳು 10 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಶಿಷ್ಯರಾದ ಶ್ರುತಿ ಬಂಗೇರ, ಪಲ್ಲವಿ ಕೊಡಗು, ಶಿಶಿರ್, ಮನೋಜ್ ಕಾರ್ತಿಕ್, ಸುಮಂತ್ ಮೊದಲಾದವರಿಂದ ಪ್ರಾತ್ಯಕ್ಷಿಕೆ ನಡೆಯಿತು. ಮಣಿಪಾಲದ ವೈದ್ಯ ಪ್ರಶಾಂತ್ ಶೆಟ್ಟಿಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

