ಮಂಗಳೂರು : ಉದ್ಯಮಿಯಾಗಿ,ಯಕ್ಷಗಾನ ವೇಷಧಾರಿ ಹಾಗೂ ಕಲಾವಿದನಾಗಿ ಖ್ಯಾತಿ ಹೊಂದಿದ್ದ ಎಂ.ಬಿ.ಎ. ಪದವೀಧರ ಎಂ.ಎಂ.ಸಿ. ರೈ (ಮೋಹನ ಚಂದ್ರ ರೈ) ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಮುಂಜಾನೆ ಕುಳಾಯಿ ಹೊನ್ನಕಟ್ಟೆ ಬಳಿಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಯಕ್ಷಗಾನ ರಂಗದ ಅತ್ಯುತ್ತಮ ಅರ್ಥಧಾರಿ ಮತ್ತು ವೇಷಧಾರಿಯಾಗಿದ್ದ ಎಂ.ಎಂ.ಸಿ. ರೈ ಅವರು ಮೊನ್ನೆ ತಾನೇ 2023 ನವೆಂಬರ್ 25ರಂದು ನಮ್ಮ ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ಶಲ್ಯನ ಪಾತ್ರವಹಿಸಿ ತರ್ಕ ಬದ್ಧ ಅರ್ಥ ಹೇಳಿದ್ದರು. ತಮ್ಮ ತುಳುನಾಡು ಬೋರ್ ವೆಲ್ಸ್ ಎಂಬ ಉದ್ಯಮ ಸಂಸ್ಥೆಯ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದ ಅವರು ಕೊಡುಗೈ ದಾನಿ ಎನಿಸಿದ್ದರು. ಮೃತರ ಆತ್ಮಕ್ಕೆ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.

