ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಯಕ್ಷಗಾನ ಕ್ಷೇತ್ರಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹಲವು ಕಲಾವಿದರ ಸಾಲಿನಲ್ಲಿ ಸದ್ಯ ಮಿಂಚುತ್ತಿರುವ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು. ತಂದೆ ಮೊಗೆಬೆಟ್ಟು ಹೆರಿಯ ನಾಯ್ಕ ಮೊದಲ ಪ್ರೇರಣೆ, . ಆ ನಂತರ ಇವರ ಮಾನಸಗುರು ಕಂದಾವರ ರಘುರಾಮ ಶೆಟ್ಟರ ಪ್ರಸಂಗಗಳು, ಕಂದಾವರರ ಚೆಲುವೆ ಚಿತ್ರಾವತಿ, ಬನಶಂಕರಿ ಯಕ್ಷಗಾನ ಪ್ರದರ್ಶನ ನೋಟ ಹಾಗೂ ಕಂದಾವರರ ಪದ್ಯ ರಚನೆಯ ಪ್ರಭಾವ; ಕಾಳಿಂಗ ನಾವಡರ ಪದ್ಯ ಹಾಗೂ ಪ್ರಸಂಗಗಳೂ ಪ್ರೇರಣೆ.
ಹವ್ಯಾಸಿ ಯಕ್ಷಗಾನ ರಂಗಭೂಮಿಯಿಂದ ಬಂದವರು ಮೊಗೆಬೆಟ್ಟು ಚಿಕ್ಕಮ್ಮ ಹೈಗುಳಿ ಯಕ್ಷಗಾನ ಮಂಡಳಿಯ ಬಾಲಕಲಾವಿದನಾಗಿ 10 ನೆಯ ವಯಸ್ಸಿನಲ್ಲಿ ಬಬ್ರುವಾಹನನಾಗಿ ರಂಗ ಪ್ರವೇಶ ಮಾಡಿದೆ. ಆ ದಿವಸವೇ ಇವರ ವೇಷ ಮೆಚ್ಚಿ ಆಟ ನೋಡುತ್ತಿದ್ದ ಪಂಚಾಯತ್ ಅಧ್ಯಕ್ಷರು ಇವರಿಗೆ ಸನ್ಮಾನ ಮಾಡಿ ಗೌರವಿಸಿದರು. 1998 ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಸಾಂಪ್ರದಾಯಿಕ ಯಕ್ಷಗಾನ ಶಿಕ್ಷಣಕ್ಕೆ ಸೇರಿ ಕಲಿತ ಕೇಂದ್ರದಲ್ಲಿ ಗುರುವಾಗಿ, ಡಾ.ಶಿವರಾಮ ಕಾರಂತರ ನಿರ್ದೇಶನದ “ಯಕ್ಷರಂಗ” ಎಂಬ ಹೆಸರಿನ ಯಕ್ಷಗಾನ ಬ್ಯಾಲೆ ( ಅಂತಾರಾಷ್ಟ್ರೀಯ ಯಕ್ಷಗಾನ ತಂಡ ) ದಲ್ಲಿ ಭಾಗವತನಾಗಿಯೂ ವೇಷಧಾರಿಯಾಗಿಯೂ ಭಾಗವಹಿಸಿ ಕೃಷ್ಣ, ಬಬ್ರುವಾಹನ, ಅಭಿಮನ್ಯು, ಪ್ರಸೇನ, ಶರಸೇತು, ಲಂಕಿಣಿ ಮೋಕ್ಷ, ಚೂಡಾಮಣಿಯ ಹನುಮಂತ, ಅಂಬೆ, ಸುಭದ್ರೆ, ಭ್ರಮರಕುಂತಳೆ, ಪ್ರಭಾವತಿ, ಚಿತ್ರಾಂಗದೆ, ತ್ರಿಲೋಕಸುಂದರಿ, ತಾರೆ, ಸೀತೆ ಎಲ್ಲಾ ರೀತಿಯ ಸ್ತ್ರೀ ಎಲ್ಲಾ ರೀತಿಯ ಸ್ತ್ತೀವೇಷ,ಪುರುಷ ವೇಷ ಮಾಡಿದ ಅನುಭವವಿದೆ. ಬಡಗು ಮತ್ತು ತೆಂಕಿನ ಎಲ್ಲಾ ದಿಗ್ಗಜರೊಂದಿಗೂ ಆಟ,ಕೂಟಗಳಲ್ಲಿ ರಂಗ ಹಂಚಿಕೊಂಡಿದ್ದಾರೆ. ಗಣೇಶ ಕೊಲೆಕಾಡಿಯವರಲ್ಲಿ ಯಕ್ಷಗಾನ ಛಂದಸ್ಸು ಕಲಿತ ಇವರು ಛಂದೋಬದ್ಧ ಯಕ್ಷಕವಿಯಾಗಿ ಗುರುತಿಸಿಕೊಂಡರು.
ತಮ್ಮ14ನೆಯ ವಯಸ್ಸಿನಲ್ಲಿ ಅಂದರೆ 9ನೆಯ ತರಗತಿಯಲ್ಲಿ ‘ಕೋಳಿ ಪಡೆ ರಂಗ’ ಎಂಬ ಆಡಿಯೋ ಹಾಸ್ಯ ಪ್ರಸಂಗ ಬರೆದು. ಅದು ಗಾನಸುಧಾ ಹಾಗೂ ಲಹರಿ ಮ್ಯೂಸಿಕ್ ಮೂಲಕ ಯಕ್ಷಗಾನ ಆಡಿಯೋ ಆಗಿ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟವಾಯಿತು. ಆ ಮೇಲೆ
ಅಮರಾಮೃತ, ಅಮೃತ ಘಳಿಗೆ, ಸಿಂಗಾರ ಪುಷ್ಪ , ಶೃಂಗಾರಕಾವ್ಯ, ದುರ್ಗಾಷ್ಟಮಿ , ನಕ್ಷತ್ರ ನಾಗಿಣಿ, ನಾಟ್ಯವಲ್ಲಿ, ಬ್ರಹ್ಮಾಕ್ಷರ( ಪಂಚತಂತ್ರ), ಮಹಾಶಕ್ತಿ ಗದ್ದುಗೆ ಅಮ್ಮ, ವಡ್ಡರ್ಸೆ ವಸುಂಧರೆ, ಹಿರೇ ಮಹಾಲಿಂಗೇಶ್ವರ ಕ್ಷೇತ್ರ ಮಹಾತ್ಮೆ, ಪ್ರಚಂಡ ಪಂಜುರ್ಲಿ, ಪಂಚದೈವ ಪ್ರತಾಪ, ಭಾಗ್ಯದ ಬಬ್ಬುಸ್ವಾಮಿ, ಪಾವನ ಪಕ್ಷಿ, ಸರ್ಪ ಸುಪರ್ಣ, ಕಾಮನಬಿಲ್ಲು, ಅಗ್ನಿ ವರ್ಷ, ಅಪೂರ್ವ ಅರ್ಧಾಂಗಿ, ಸ್ವಪ್ನ ಮಂಟಪ, ಕುಂದ ಪಂಚಮಿ, ಯೋಧಧರ್ಮೋ ವರಂ ಕರ್ಮ, ರಂಗಸಖಿ, ಚಿತ್ರ ಫಲ್ಗುಣ, ಕೋಳಿ ಪಡೆ ರಂಗ, ನರಹರಿ ಹೊಯ್ಕೈ (ಕುಂದಾಪುರ ಕನ್ನಡದ ಸಂಪೂರ್ಣ ಯಕ್ಷಗಾನ ಪ್ರಸಂಗ), ವಿಕ್ರಮ ಶಿಲ್ಪಿ ವೀರ ಕಲ್ಕುಡ, ಕ್ರಾಂತಿ ಸೂರ್ಯ ಭಗತ ಸಿಂಹ, ಹಾಸ್ಯ ರತ್ನ ತೆನಾಲಿ ರಾಮಕೃಷ್ಣ ಸೇರಿದಂತೆ ಮೂವತ್ತೈದು ಪ್ರಸಂಗಗಳನ್ನು ಬರೆದಿದ್ದಾರೆ.
ಯೋಧಧರ್ಮೋ ವರಂ ಕರ್ಮ,
ರಂಗಸಖಿ,ಭಾಮಾಶ್ಯಾಮಾ, ಚಿತ್ರ ಫಲ್ಗುಣ ಇವರು ಬರೆದ ಯಕ್ಷರೂಪಕಗಳು.
ಇತರರ ಇಪ್ಪತ್ತು ಪ್ರಸಂಗಗಳಿಗೆ ಪದ್ಯ ರಚನೆ ಮಾಡಿರುತ್ತಾರೆ. ಸರಿಸುಮಾರು 10,000 ಯಕ್ಷಗಾನ ಪದ್ಯಗಳನ್ನು ಯಕ್ಷಗಾನ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಧನ್ಯತೆ ಇವರಿಗೆ ಸಲ್ಲುತ್ತದೆ.
ದೆಹಲಿ, ನಾಗ್ಪುರ್, ಸಿಕ್ಕಿಂ, ಮದ್ರಾಸ್, ರಾಜಸ್ಥಾನ, ಮೇಘಾಲಯ, ಗುಜರಾತ್, ಅಸ್ಸಾಂ, ಪುರಿ, ಭುವನೇಶ್ವರ್, ಗೋವಾ, ಕೇರಳ, ಮುಂಬೈ, ತಮಿಳುನಾಡು ಭಾರತಾದ್ಯಂತ ಕಲಾಸಂಚಾರ. ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಐರ್ಲ್ಯಾಂಡ್, ಸಿಂಗಾಪುರ್, ಆಸ್ಟ್ರೇಲಿಯಾದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಹಿರಿಮೆ ಇವರಿಗೆ ಸಲ್ಲುತ್ತದೆ.
ಯಕ್ಷಗಾನ ರಂಗದ ಎಲ್ಲಾ ವಿಭಾಗದಲ್ಲಿ ಕಲಾ ಸೇವೆ ಮಾಡಿದ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಯಕ್ಷ ಬದುಕಿನ ರಜತ ಸಂಭ್ರಮದ ಕಾರ್ಯಕ್ರಮ ನವೆಂಬರ್ 4 ರಂದು ಶನಿವಾರ ಮಧ್ಯಾಹ್ನ 2.00 ಗಂಟೆಯಿಂದ ಬ್ರಹ್ಮಾವರದ ಶ್ಯಾಮಿಲಿ ಶನಾಯದಲ್ಲಿ.
ಇದೊಂದು ಭಾವನಾತ್ಮಕವಾದ ಕಲಾತ್ಮಕ ಕಾರ್ಯಕ್ರಮ.
ತಮಗೆ ಕಲಾವಿದ್ಯೆಯನ್ನು ಬೋಧಿಸಿದ ಗುರುವಿನ ಕಲಾಬದುಕಿನ ರಜತ ವರ್ಷವನ್ನು ಹಬ್ಬವಾಗಿಸುವ ಶಿಷ್ಯರ ಮಾದರಿ ಕಾರ್ಯಕ್ರಮವಿದು.
ಇಲ್ಲಿ ಮೊಗೆಬೆಟ್ಟು ಶಿಷ್ಯವೃಂದವಿದೆ,ಅಭಿಮಾನಿ ಕೂಟವಿದೆ. ಎಲ್ಲರಿಗೂ ಮೊಗೆಬೆಟ್ಟಿಗೊಂದು ಇಂತಹ ಕಾರ್ಯಕ್ರಮ ಆಗಬೇಕೆಂಬುದೇ ಆಶಯ.
ಗುರು ಗೌರವದ ರಜತ ಪರ್ವದಲ್ಲಿ ಎರಡು ಆಟಗಳಿವೆ. ಒಂದು ಸುಧನ್ವಾರ್ಜುನ. ಇನ್ನೊಂದು ಕುಶಲವ. ಎರಡೂ ಪ್ರದರ್ಶನಗಳು ನೋಡಲೇಬೇಕಾದ್ದು.
ಮೊಗೆಬೆಟ್ಟು ಅವರಿಗೆ ಕಲಾಭಿಮಾನಿಗಳ ಸರ್ವಮುಖದ ಸಹಕಾರವೂ ದೊರಕುವಂತಾಗಲಿ. ಸಮಾರಂಭ ಅದ್ಭುತ ಯಶೋಗಾಥೆ ಬರೆಯಲಿ.
ಸರ್ವರಿಗೂ ಆದರದ ಸ್ವಾಗತ .
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.