ಮೂಡುಬಿದಿರೆ : ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ 42 ವರ್ಷಗಳ ಸೇವಾನುಭವದೊಂದಿಗೆ ಇದೀಗ ಅರುವತ್ತರ ಸಂಭ್ರಮದಲ್ಲಿರುವ ಸುಬ್ರಾಯ ಹೊಳ್ಳ ಇವರನ್ನು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪಾವಂಜೆ ಮೇಳದ ಬಯಲಾಟದ ರಂಗಸ್ಥಳದಲ್ಲಿ ದಿನಾಂಕ 24 ಮೇ 2025 ಶನಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮ್ಮಾನಿಸಲಾಯಿತು.
ಪಟ್ಲ ಫೌಂಡೇಶನ್ ಕೇಂದ್ರೀಯ ಸಮಿತಿ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮೂಡುಬಿದಿರೆ ಘಟಕದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ ಬೆಳುವಾಯಿ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೇಂದ್ರೀಯ ಸಮಿತಿ ಟ್ರಸ್ಟಿ ಪ್ರೇಮನಾಥ ಮಾರ್ಲ, ಗಣ್ಯರಾದ ಉದ್ಯಮಿ ತಿಮ್ಮಯ್ಯ ಶೆಟ್ಟಿ, ಜಗದೀಶ ಅಧಿಕಾರಿ, ಸುದರ್ಶನ ಎಂ. ಇವರು ಸುಬ್ರಾಯ ಹೊಳ್ಳ ಇವರನ್ನು ಶಾಲು, ಹಾರ, ಪೇಟ, ಫಲವಸ್ತು, ಸಮ್ಮಾನ ಪತ್ರ, ಸ್ಮರಣಿಕೆ ಹಾಗೂ ಗೌರವ ಧನ ಸಹಿತ ಸಮ್ಮಾನಿಸಿದರು.
ಸಮ್ಮಾನಿತರನ್ನು ಶಾಂತರಾಮ ಕುಡ್ವ ಇವರು ಪರಿಚಯಿಸಿ ಅಭಿನಂದಿಸಿ “ಪುತ್ತೂರು, ಕಟೀಲು, ಕದ್ರಿ, ಬಪ್ಪನಾಡು, ಎಡನೀರು, ಹೊಸನಗರ, ಹನುಮಗಿರಿ, ಹೊಸನಗರ, ಧರ್ಮಸ್ಥಳ ಮತ್ತು ಇದೀಗ ಪಾವಂಜೆ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ 60ರ ಹರೆಯದ ಸುಬ್ರಾಯ ಹೊಳ್ಳರು ಸವ್ಯಸಾಚಿ ಕಲಾವಿದರೆಂದೇ ಗುರುತಿಸಲ್ಪಡುತ್ತಿರುವವರು” ಎಂದರು. ಪ್ರತಿಕ್ರಿಯೆ ನೀಡಿದ ಹೊಳ್ಳರು “ಸಮ್ಮಾನದಿಂದ ಸಂತಸವಾಗಿದೆ. ಈ ರಂಗದಲ್ಲಿ ಶ್ರದ್ಧೆಯಿಂದ ದುಡಿಯುತ್ತಿರುವ ತನಗೆ ಇನ್ನಷ್ಟು ಹುರುಪು ಬಂದಂತಾಗಿದೆ. ಪಟ್ಲ ಸತೀಶ ಶೆಟ್ಟಿಯವರು ಫೌಂಡೇಶನ್ ಮೂಲಕ ನಡೆಸುತ್ತಿರುವ ಕಾರ್ಯಕ್ರಮಗಳು ಕಲಾವಿದರ ಪಾಲಿಗೆ ಚೇತೋಹಾರಿಯಾಗಿವೆ” ಎಂದರು.
ಪಟ್ಲ ಸತೀಶ ಶೆಟ್ಟಿಯವರು ಮಾತನಾಡಿ, ಸುಬ್ರಾಯ ಹೊಳ್ಳರು ಬೆರಳೆಣಿಕೆಯಲ್ಲಿರುವ ಪಾರಂಪರಿಕ ಕಲಾವಿದರಾಗಿ ನಮ್ಮ ಜತೆ ಇದ್ದಾರೆ ಎಂದು ನುಡಿದು, ದಿನಾಂಕ 01 ಜೂನ್ 2025ರಂದು ಮಂಗಳೂರು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ ರಾಷ್ಟ್ರೀಯ ಕಲಾ ಸಮ್ಮೇಳನಕ್ಕೆ ಕಲಾಭಿಮಾನಿಗಳನ್ನು ಆಹ್ವಾನಿಸಿದರು. ಕೇಂದ್ರೀಯ ಸಮಿತಿ ಟ್ರಸ್ಟಿಯಾಗಿ ಆಯ್ಕೆಯಾಗಿರುವ ದಿವಾಕರ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಅರುಣ್ ಸಮಾಜ ಮಂದಿರ, ಕೋಶಾಧಿಕಾರಿ ಸದಾಶಿವ ಶೆಟ್ಟಿಗಾರ್, ಸಂಘಟನ ಕಾರ್ಯದರ್ಶಿಗಳಾದ ಮನೋಜ್‌ಕುಮಾರ್ ಶೆಟ್ಟಿ, ಪುನೀತ್ ಕುಮಾರ್ ಕಟ್ಟೆಮಾರ್ ಮೊದಲಾದ ಪದಾಧಿಕಾರಿಗಳು, ಸದಸ್ಯರಿದ್ದರು. ಸಂಚಾಲಕ ರವಿಪ್ರಸಾದ್ ಕೆ. ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ಸದಾಶಿವ ನೆಲ್ಲಿಮಾರು ವಂದಿಸಿದರು. ಪಾವಂಜೆ ಮೇಳದವರಿಂದ ‘ಸಹಸ್ರ ಕವಚ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡಿತು.