ಮೂಡುಬಿದಿರೆ : ಮುದ್ದಣ ಪ್ರಕಾಶನ-ಬಲಿಪಗಾನ ಯಾನ ಆಶ್ರಯದಲ್ಲಿ ದಿನಾಂಕ 17-02-2024ರಂದು ಮೂಡುಬಿದಿರೆಯ ಅಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮುದ್ದಣ ಕವಿಯ ‘ಶ್ರೇಷ್ಠ ಯಕ್ಷಗಾನ ಪ್ರಸಂಗಗಳ ಧ್ವನಿ ಮುದ್ರಣ’ದ ಲೋಕಾರ್ಪಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಧ್ವನಿ ಮುದ್ರಣದ ಲೋಕಾರ್ಪಣೆ ಮಾಡಿದ ಅಷ್ಟಾವಧಾನಿ ವಸಂತ ಭಾರದ್ವಾಜ್ ಕಬ್ಬಿನಾಲೆ ಮಾತನಾಡುತ್ತಾ “ಮುದ್ದಣನ ಕಾವ್ಯಗಳು ಕ್ಲಿಷ್ಟಕರವೆಂದು ಅದನ್ನು ರಂಗವೇದಿಕೆಯಲ್ಲಿ ಹಾಡುವುದಕ್ಕೆ ಕೆಲವು ಭಾಗವತರು ಆಸಕ್ತಿ ತೋರದಿರುವುದು ಮತ್ತು ಅದನ್ನು ಸಾಕ್ಷಾತ್ಕರಿಸುವ ಕೌಶಲವನ್ನು ಕಲಾವಿದರು ಪ್ರದರ್ಶಿಸದೆ ಇರುವುದೇ ಕುಮಾರತ್ರಯದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಲು ಕಾರಣ. ಕುಮಾರ ವಿಜಯವನ್ನು ಬಿಟ್ಟರೆ ಪ್ರಸಂಗ ಇಲ್ಲ, ಮುದ್ದಣನನ್ನು ಬಿಟ್ಟರೆ ಕವಿ ಇಲ್ಲ ಎನ್ನುವ ವಿಮರ್ಶಕರ ಮಾತು ಸರಿಯಾಗಿದೆ. ಮುದ್ದಣನ ಕೃತಿಗಳ ವಿಶೇಷತೆ ಏನೆಂದರೆ ಅದರ ಛಂದೋಬದ್ಧ ಮತ್ತು ಪದ ಪ್ರಯೋಗ ಕೌಶಲ. ಪ್ರತಿ ಪದದಲ್ಲೂ ಒಂದು ಅಭಿನಯವನ್ನು ಕಾಣಬಹುದು. ಅದಕ್ಕಾಗಿಯೇ ಮುದ್ದಣನ ಕಾವ್ಯಗಳು ಇತರ ಪ್ರಸಂಗಗಳಿಗಿಂತ ವಿಶೇಷವಾಗಿರಲು ಕಾರಣ. ಮುದ್ದಣನ ಕಾವ್ಯದಲ್ಲಿರುವ ಶಬ್ದ ಚಮತ್ಕಾರದಿಂದಾಗಿ ಕಲಾವಿದರು ಅದನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಾಗದೆ ತೆಂಕು ಮತ್ತು ಬಡಗು ತಿಟ್ಟಿನ ಹೆಚ್ಚಿನ ಕಲಾವಿದರು ಕಷ್ಟಪಡುತ್ತಾರೆ. ಕಲಾವಿದರು, ಕವಿಗಳು, ಸಾಹಿತಿಗಳು ನಮ್ಮ ಕನ್ನಡದ ಕಾವ್ಯ ಸ್ವಾರಸ್ಯಗಳನ್ನು ಜನರಿಗೆ ತಿಳಿಯಪಡಿಸುವ ವಿನೀತ ಪ್ರಜ್ಞೆ ಇರಬೇಕು. ಅಧ್ಯಯನಶೀಲರಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ. ಯಕ್ಷಗಾನ ಎಂಬುದು ಕಾವ್ಯದ ಆಸ್ವಾದನೆಯ ರಂಗವೂ ಹೌದು, ಸಂಗೀತ, ನೃತ್ಯದ ರಸಾಸ್ವಾದನೆಯೂ ಹೌದು. ಅನೇಕ ಕಲೆಗಳ ಸಮಾಶ್ರಯವಾಗಿದ್ದರಿಂದಲೇ ಯಕ್ಷಗಾನ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಯಕ್ಷಗಾನದಲ್ಲಿ ಹೊಸತನದ ಪ್ರಯೋಗಗಳು ನಡೆದರೂ ಅದು ವ್ಯಾಕರಣದ ಚೌಟ್ಟಿನೊಳಗಿರಬೇಕು. ಶ್ರೇಷ್ಠ ಕವಿ ಮುದ್ದಣನ ಕೃತಿಯನ್ನು ರಂಗವೇದಿಕೆಯಲ್ಲಿ ಪ್ರದರ್ಶಿಸಲು ಇದ್ದ ಕೊರತೆಯನ್ನು ನಿವಾರಿಸಲು ಬಾಲಚಂದ್ರ ರಾವ್ ನಂದಳಿಕೆ, ಚಂದ್ರಶೇಖರ್ ಭಟ್ ಕೊಂಕಣಾಜೆ ಅವರ ತಂಡದ ಶ್ರಮ ಶ್ಲಾಘನಾರ್ಹ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ “ಕಾಲಗತಿಯಲ್ಲಿ ಭಾಷೆ, ಸಂಸ್ಕೃತಿ ಮಾರ್ಪಾಡಾಗುತ್ತಿರುವ ಆತಂಕ ಇದ್ದರೂ ಅದರ ಮೂಲ ಸ್ವರೂಪ, ಮೌಲ್ಯವನ್ನು ಉಳಿಸಿಕೊಳ್ಳುವುದು ಮುಖ್ಯ. ಮುದ್ದಣನ ಕಾವ್ಯವನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಹಲವು ವರ್ಷಗಳ ಪರಿಶ್ರಮ ಸಾರ್ಥಕವಾಗಿದೆ” ಎಂದರು.
ಉದ್ಯಮಿ ಶ್ರೀಪತಿ ಭಟ್, ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ, ಮುದ್ದಣನ ಕಾವ್ಯ ಪ್ರಕಾಶನದ ಅಧ್ಯಕ್ಷೆ ವಿಜಯಲಕ್ಷ್ಮಿ ಬಾಲಚಂದ್ರ ಭಾಗವಹಿಸಿದ್ದರು. ಪ್ರಕಾಶನದ ಕಾರ್ಯದರ್ಶಿ ಸೌಜನ್ಯಾ ನಂದಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಭಟ್ ಕೊಂಕಣಾಜೆ ನಿರೂಪಿಸಿ, ಮುದ್ದಣ ಪ್ರಕಾಶನದ ನಿರ್ದೇಶಕ ಬಾಲಚಂದ್ರ ರಾವ್ ನಂದಳಿಕೆ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಬಲಿಪ ಶಿವಶಂಕರ ಭಟ್ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಭಾಗವತಿಕೆಯಲ್ಲಿ ‘ಕುಮಾರ ವಿಜಯ’ ಪ್ರಸಂಗದ ಆಯ್ದ ಪದಗಳ ‘ಬಲಿಪ ಗಾನಯಾನ’ ಪ್ರಸ್ತುತಿಪಡಿಸಲಾಯಿತು.