ಉಡುಪಿ : ಹವ್ಯಾಸಿ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣ (79) ದಿನಾಂಕ 26 ನವೆಂಬರ್ 2025ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನೀಲಾವರ ರಾಮಕೃಷ್ಣಯ್ಯನವರಲ್ಲಿ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಸುದೀರ್ಘ ಐದು ದಶಕಗಳ ಕಾಲ ಯಕ್ಷಗಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಉಡುಪಿಯ ಅತ್ಯಂತ ಹಿರಿಯ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾರಂಗದಿಂದ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಯನ್ನು ಪಡೆದ, ಯಕ್ಷಗಾನ ಕಲಾಕ್ಷೇತ್ರ (ರಿ.), ಗುಂಡಿಬೈಲು ಸಂಸ್ಥೆಯಲ್ಲಿ ಆರು ದಶಕಗಳ ಕಾಲ ಪದಾಧಿಕಾರಿಗಳಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಆ ಸಂಸ್ಥೆಯ ಅವಿಭಾಜ್ಯ ಭಾಗವೇ ಆಗಿದ್ದರು. ಕಲಾಕ್ಷೇತ್ರ ನಡೆಸಿಕೊಂಡು ಬಂದ ತಿಂಗಳ ಕೂಟ, ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಶ್ರದ್ಧೆಯ ಕಾರ್ಯಕರ್ತರಾಗಿ ದೊಡ್ಡ ಕೊಡುಗೆ ನೀಡಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಸುವರ್ಣರು ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸುತ್ತಿದ್ದರು. ಆಟ ಕೂಟಗಳ ಸಹೃದಯ ಪ್ರೇಕ್ಷಕರಾಗಿ ಕಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿದ್ದರು.
