ಕಾಸರಗೋಡು : ಯಕ್ಷಗಾನ ಕ್ಷೇತ್ರಕ್ಕೆ ಅಪರೂಪವೆನಿಸಿದ ಶ್ರೀ ಪುರಂದರದಾಸರು ರಚಿಸಿದ ‘ಅನಸೂಯಾ ಚರಿತ್ರೆ’ ಯಕ್ಷಗಾನ ಪ್ರಸಂಗವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಕಟಿಸಿದ್ದು, ಇದರ ಲೋಕರ್ಪಣಾ ಸಮಾರಂಭವು ದಿನಾಂಕ 18 ಅಕ್ಟೋಬರ್ 2025ರಂದು ಕಾಸರಗೋಡಿನ ಸಿರಿಬಾಗಿಲಿನಲ್ಲಿರುವ ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಶ್ರೀ ಸುಬ್ರಮಣ್ಯ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿ “ದಾಸ ಶ್ರೇಷ್ಠ ಶ್ರೀಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗವನ್ನು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಶ್ರಮವಹಿಸಿ ಸಂಪಾದಿಸಿದ್ದಾರೆ. ಈ ಅಮೂಲ್ಯ ಕೃತಿಯನ್ನು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಾಶನಗೊಳಿಸಿ, ಇಂದು ನಮ್ಮಿಂದ ಲೋಕಾರ್ಪಣೆಗೊಳಿಸಿದ್ದಾರೆ. ಪ್ರತಿಯೊಬ್ಬರ ನೆನಪಿನಲ್ಲಿರುವ, ಕೇಳಿದಷ್ಟು ಮತ್ತೂ ಮತ್ತೂ ಕೇಳಬೇಕೆನಿಸುವ ದಾಸರ ಪದಗಳು ಶ್ರೇಷ್ಠವಾದವು. ಅಂತಹದ್ದರಲ್ಲಿ, ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಸೇರ್ಪಡೆಗೊಂಡ ಅತ್ಯಂತ ಪ್ರಾಚೀನ ಕಾಲದ ಈ ಕೃತಿಯಿಂದ ಮತ್ತಷ್ಟು ಯಕ್ಷಗಾನ ಕಲೆಯು ಬೆಳೆಯಲಿ, ಬೆಳಗಲಿ. ಹೆಚ್ಚಿನ ಪ್ರಸಂಗ ಪದ್ಯಗಳನ್ನು ಕಂಠಪಾಠ ಹೊಂದಿರುವ ಭಾಗವತ ಶ್ರೇಷ್ಠರು ರಾಮಕೃಷ್ಣ ಮಯ್ಯರು. ಅಂಥವರ ನೇತೃತ್ವದ ಸಿರಿಬಾಗಿಲು ಪ್ರತಿಷ್ಠಾನದ ಇಂತಹ ಹಲವಾರು ಸಮಾಜಮುಖೀ ಚಟುವಟಿಕೆಗಳು ನಮಗೆ ಸಂತೋಷ ತಂದಿದೆ. ಪ್ರತಿಷ್ಠಾನದಿಂದ ಇನ್ನೂ ಇಂತಹ ಸಾಹಿತ್ಯ – ಸಾಂಸ್ಕೃತಿಕ ಕೊಡುಗೆಗಳು ಸಮಾಜಕ್ಕೆ ಸಿಗುವಂತಾಗಲಿ” ಎಂದು ಆಶೀರ್ವದಿಸಿದರು.
ಮುಖ್ಯ ಅಭ್ಯಾಗತರಾದ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡಿ “ಯಕ್ಷಗಾನದ ಪ್ರಾಚೀನ ಕೃತಿಗಳೆಂದರೆ ನಾವು ತಿಳಿದದ್ದು ಕುಂಬಳೆ ಪಾರ್ತಿಸುಬ್ಬನದ್ದೇ ಎಂದು. ಆದರೆ ಈ ಸಂಶೋಧನೆಯಿಂದ ಪುರಂದರದಾಸರ ಅನಸೂಯಾ ಚರಿತ್ರೆಯೇ ಆದ್ಯ ಕೃತಿ ಎಂದಂತಾಯಿತು. ಈ ಕೃತಿಯಿಂದ ಯಕ್ಷಗಾನ ಸಾಹಿತ್ಯವು ಮೊದಲು ಹೇಗಿತ್ತು ? ಎಂದು ನಮಗೆ ತಿಳಿಯುವಂತಾಗಿದೆ. ಈ ಕಠಿನತಮ ಕಾರ್ಯವೆಸಗಿದ ಡಾ. ಕಬ್ಬಿನಾಲೆಯವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ” ಎಂದು ಶುಭಾಶ0ಸನೆಗೈದರು.
ಸಭಾಧ್ಯಕ್ಷತೆ ವಹಿಸಿದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿವಿಯ ನಿರ್ದೇಶಕರಾದ ಡಾ. ಧನಂಜಯ ಕುಂಬಳೆಯವರು, “ಈ ಪ್ರಾಚೀನ ಕೃತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಮೂಲಕ ವಿಶ್ವವಿದ್ಯಾಲಯದಲ್ಲಿ ತಾಳಮದ್ದಲೆ ರೂಪದಲ್ಲಿ ಪ್ರಸ್ತುತ ಪಡಿಸುವ ಬಗ್ಗೆ ಯೋಚಿಸಲಾಗಿದೆ” ಎಂದರು. ಈ ಕೃತಿಯ ಸಂಪಾದಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಕೃತಿ ಪರಿಚಯವನ್ನು ಮಾಡುವುದರೊಂದಿಗೆ ಇದರ ಸಂಪಾದನೆ – ಸಂಶೋಧನೆಯ ವಿವರಗಳನ್ನು ಸಭಿಕರಿಗಿತ್ತರು. ಶ್ರೀ ಕೃಷ್ಣ ಶರ್ಮಾ, ನಿವೃತ್ತ ಮುಖ್ಯೋಪಾಧ್ಯಾಯ, ಕುಕ್ಕೆ ಸುಬ್ರಹ್ಮಣ್ಯರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿ, ಶ್ರೀ ರಾಜಗೋಪಾಲ ಕನ್ಯಾನ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ಧನ್ಯವಾದವಿತ್ತರು.
ತದನಂತರ, ಅನಸೂಯಾ ಚರಿತ್ರೆ ಪ್ರಸಂಗದ ಗಾನ ಪ್ರಸ್ತುತಿಯು ಪ್ರಥಮ ಬಾರಿಗೆ ನಡೆಯಿತು. ಹಿರಿಯ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತಲ್ಪನಾಜೆ ವೆಂಕಟ್ರಮಣ ಭಟ್, ಕುಮಾರಿ ಹೇಮ ಸ್ವಾತಿ ಕುರಿಯಾಜೆಯವರ ಭಾಗವತಿಕೆ, ಚೆಂಡೆ – ಮದ್ದಳೆಯಲ್ಲಿ, ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಮಧೂರು ಗೋಪಾಲಕೃಷ್ಣ ನಾವಡ, ರಾಮಮೂರ್ತಿ ಕುದುರೆಕ್ಕೋಡ್ಲು ಹಾಗೂ ರಾಜ ಮಯ್ಯ ಚಕ್ರತಾಳದಲ್ಲಿ ಸಹಕರಿಸಿದರು. ಉದಯೋನ್ಮುಖ ಭಾಗವತೆ ಕುಮಾರಿ ಹೇಮಸ್ವಾತಿ ಕುರಿಯಾಜೆಯವರ ಭಾಗವತಿಕೆ ಎಲ್ಲರ ಗಮನ ಸೆಳೆಯಿತು. ವಸಂತ ಭಾರದ್ವಾಜರು ಸೊಗಸಾಗಿ ಗಾನಪ್ರಸ್ತುತಿಯ ನಿರ್ವಹಣೆ ಮಾಡಿದರು.